ದಾಂಡೇಲಿ: ದಾಂಡೇಲಿ ಪ್ರೀಮಿಯರ್ ಲೀಗ್ ಆಶ್ರಯದಡಿ ಸೀಸನ್ 3 ಹಾಗೂ ಇದೇ ಮೊದಲ ಬಾರಿಗೆ ಹೊನಲು ಬೆಳಕಿನ ಒಟ್ಟು ಮೂರು ದಿನಗಳ ಕ್ರಿಕೆಟ್ ಪಂದ್ಯಾವಳಿಯು ಫೆಬ್ರವರಿ: 9 ರಿಂದ ಫೆ : 11 ರವರೆಗೆ ನಗರದ ಡಿ.ಎಸ್.ಎಫ್.ಎ ಮೈದಾನದಲ್ಲಿ ನಡೆಯಲಿದೆ ಎಂದು ದಾಂಡೇಲಿ ಪ್ರೀಮಿಯರ್ ಲೀಗ್ ಇದರ ಅಧ್ಯಕ್ಷರಾದ ವಿಷ್ಣುಮೂರ್ತಿ ರಾವ್ ಹೇಳಿದರು.
ಅವರು ನಗರದ ಸಂತೋಷ್ ಹೋಟೆಲ್ ಸಭಾಭವನದಲ್ಲಿ ಶುಕ್ರವಾರ ಸಂಜೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ದಾಂಡೇಲಿ ಪ್ರೀಮಿಯರ್ ಲೀಗ್ ಕಳೆದ ಎರಡು ವರ್ಷಗಳಿಂದ ಕ್ರಿಕೆಟ್ ಪಂದ್ಯಾವಳಿಯನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಿಕೊಂಡು ಬಂದಿದೆ. ಈ ವರ್ಷ ಮೊದಲ ಬಾರಿಗೆ ಹೊನಲು ಬೆಳಕಿನ ಪಂದ್ಯಾವಳಿಯನ್ನು ಆಯೋಜಿಸುತ್ತಿದೆ. ಫೆಬ್ರವರಿ 8ರಂದು ಕ್ರಿಕೆಟ್ ಪಂದ್ಯಾವಳಿಯ ವಿದ್ಯುಕ್ತ ಉದ್ಘಾಟನಾ ಸಮಾರಂಭ ನಡೆಯಲಿದೆ. ಉದ್ಘಾಟನೆಯ ದಿನ ವಿಶೇಷ ಪ್ರದರ್ಶನ ಪಂದ್ಯವು ಹೊನಲು ಬೆಳಕಿನಲ್ಲಿ ನಡೆಯಲಿದೆ. ಫೆಬ್ರವರಿ 9 ರಿಂದ ಫೆಬ್ರವರಿ 11ರವರೆಗೆ ಒಟ್ಟು ಮೂರು ದಿನಗಳವರೆಗೆ ದಾಂಡೇಲಿಯಲ್ಲಿ ಕ್ರಿಕೆಟ್ ಹಬ್ಬ ನಡೆಯಲಿದ್ದು, ಈಗಾಗಲೇ ಎಲ್ಲ ಸಿದ್ಧತೆಗಳನ್ನು ನಡೆಸಲಾಗಿದೆ ಎಂದರು. ದಾಂಡೇಲಿ ಪ್ರೀಮಿಯರ್ ಲೀಗ್ ನ ಚೇರ್ಮನ್ ಕುಲದೀಪ್ ಸಿಂಗ್ ರಜಪೂತ್ ಅವರು ಪಂದ್ಯಾವಳಿಯ ಯಶಸ್ಸಿಗೆ ಸರ್ವರು ಸಹಕರಿಸುವಂತೆ ವಿನಂತಿಸಿದರು.
ದಾಂಡೇಲಿ ಪ್ರೀಮಿಯರ್ ಲೀಗಿನ ವಕ್ತಾರ ಇಮಾಮ್ ಸರ್ವರ್ ಮಾತನಾಡಿ ಈ ಹಿಂದಿನ ವರ್ಷಗಳಂತೆ ಈ ವರ್ಷವೂ ಒಟ್ಟು 8 ಪ್ರಾಂಚೈಸಿಗಳ ತಂಡ ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿದೆ. ಪ್ರತಿ ತಂಡದ 15 ಆಟಗಾರರಲ್ಲಿ 13 ಆಟಗಾರರು ದಾಂಡೇಲಿ ತಾಲೂಕಿನ ನಿವಾಸಿಗಳಾಗಿರಬೇಕು. ಪ್ರತಿ ತಂಡಕ್ಕೆ ಇಬ್ಬರು ಹೊರಗಿನ ಆಟಗಾರರನ್ನು ಸೇರಿಸಿಕೊಳ್ಳಲು ಅವಕಾಶವಿದೆ. ಪ್ರಥಮ ಸ್ಥಾನವನ್ನು ಪಡೆದ ತಂಡಕ್ಕೆ ನಗದು ರೂ: 1,11,111/- ಮತ್ತು ದ್ವಿತೀಯ ಸ್ಥಾನವನ್ನು ಪಡೆದ ತಂಡಕ್ಕೆ ನಗದು ರೂ : 55,555/- ಹಾಗೂ ಶಾಶ್ವತ ಫಲಕಗಳನ್ನು ನೀಡಲಾಗುವುದು. ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ದಾಂಡೇಲಿ ಪ್ರೀಮಿಯರ್ ಲೀಗಿನ ಪ್ರಮುಖರಾದ ಅನಿಲ್ ಪಾಟ್ನೇಕರ್, ದಾಂಡೇಲಿ ಪ್ರೀಮಿಯರ್ ಲೀಗಿನ ಉಪಾಧ್ಯಕ್ಷ ರಮೇಶ್ ನಾಯ್ಕ, ಕಾರ್ಯದರ್ಶಿ ಜೋಸೆಫ್ ಗೊನ್ಸಾಲಿಸ್, ಸಹ ಕಾರ್ಯದರ್ಶಿ ನರಸಿಂಗದಾಸ್ ರಾಠಿ, ಖಜಾಂಚಿ ಮನೋಹರ್ ಕದಂ, ಮಾಧ್ಯಮ ಮುಖ್ಯಸ್ಥ ವಸೀಂ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಶಮಲ್ ಅಬ್ದುಲ್ಲಾ, ಅತುಲ್ ಮಾಡ್ದೋಳ್ಕರ್, ಸಂದೀಪ್ ರಜಪೂತ್ ಮೊದಲಾದವರು ಉಪಸ್ಥಿತರಿದ್ದರು