ಕಾರವಾರ: ದಾಂಡೇಲಿಯ ನಗರದಲ್ಲಿ ಆಶ್ರಯ ಯೋಜನೆಯ ಅಡಿಯಲ್ಲಿ ಫಲಾನುಭವಿಗಳಿಗೆ ಗೃಹ ನಿರ್ಮಾಣ ಮಂಡಳಿಯವರಿಂದ ಮನೆ ನಿವೇಶನ ಕಟ್ಟಲು ಆರಂಭಿಸಿ ಹಲವು ವರ್ಷವಾದರೂ ಫಲಾನುಭವಿಗಳಿಗೆ ಮನೆ ದೊರಕಿಲ್ಲ ಎಂದು ಅಕ್ರಂ ಖಾನ್ ಆರೋಪಿಸಿದರು. ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ವೇದಿಕೆಯಿಂದ ನಡೆದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿ ದಾಂಡೇಲಿ ನಗರದಲ್ಲಿ ಗೃಹ ನಿರ್ಮಾಣ ಮಂಡಳಿ ಮತ್ತು ನಗರಸಭೆಯು ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಯ ಅಡಿಯಲ್ಲಿ ಜಿ+2 ಮನೆಗಾಗಿ ಫಲಾನುಭವಿಗಳಿಂದ ಸೆಪ್ಟೆಂಬರ್ 2016 ರಲ್ಲಿ ಅರ್ಜಿಯನ್ನು ಆಹ್ವಾನಿಸಿ ಫಲಾನುಭವಿಗಳು ದಾಖಲೆಯೊಂದಿಗೆ 50000 ಮತ್ತು 70000 ರೂಪಾಯಿ ನಗರಸಭೆಯ ಆದೇಶದ ಪ್ರಕಾರ 840 ಫಲಾನುಭವಿಗಳು ಹಣವನ್ನು ಸಂದಾಯ ಮಾಡಿದ್ದಾರೆ. ಈ ಯೋಜನೆಯು ಪಿ.ಎಂ ಆವಾಸ್ ಯೋಜನೆಯ ಅಡಿ 1100 ಮಾದರಿ ಮನೆಗಳ ನಿರ್ಮಾಣ ಕಾಮಾಗಾರಿಯನ್ನು ಟೆಂಡರ್ ನೀಡಲಾಗಿತ್ತು ಎಂದರು.
5413.40 ಲಕ್ಷ ರೂ.ಗೆ ಗುತ್ತಿಗೆಯನ್ನು ನೀಡಲಾಗಿದೆ. ಕಾಮಗಾರಿ ದಿನಾಂಕ 04/12/2018 ರಿಂದ ಪ್ರಾರಂಭಿಸಿದ್ದು ಕರಾರಿನ ಅನ್ವಯ 12 ತಿಂಗಳಲ್ಲಿ ಕಾಮಾಗಾರಿ ಮುಗಿಸಬೇಕಾಗಿತ್ತು. ಅವಧಿಯನ್ನು ಹೆಚ್ಚಿಸಿ ದಿನಾಂಕ 04/07/2020 ರವರೆಗೆ ಪೂರ್ಣಗೊಳಿಸಲು ನೀಡಲಾಗಿತ್ತು. ಮತ್ತೆ 30/04/2020 ರವರೆಗೆ ಕಾಮಾಗಾರಿ ಮುಗಿಸುವ ಅವಧಿ ನೀಡಲಾಗಿತ್ತು. ಆದರೂ ಸಹ ಕಾಮಾಗಾರಿ ಮುಗಿಯಲಿಲ್ಲ. ಈ ವಿಷಯದ ಬಗ್ಗೆ ದಾಂಡೇಲಿ ಸಮಗ್ರ ಹೋರಾಟ ಸಮಿತಿಯಿಂದ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ಹೊರಹಾಕಿದರು. ಗುತ್ತಿಗೆದಾರನನ್ನು ರಕ್ಷಿಸಲು ಗೃಹ ನಿರ್ಮಾಣ ಮಂಡಳಿಯ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ಒಟ್ಟು ಕಾಮಾಗಾರಿಯ ಶೇ. 70 ರಷ್ಟು ಹಣ ಈಗಾಗಲೇ ಗುತ್ತಿಗೆದಾರನಿಗೆ ನೀಡಿದ್ದು, ಮತ್ತೆ ಉಳಿದ ಹಣವನ್ನು ಬಿಡುಗಡೆಗೊಳಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಕಾಮಗಾರಿಯು ಕಳಪೆ ಮಟ್ಟದಿಂದ ಕೂಡಿದ್ದು ಈ ಎಲ್ಲಾ ಕಾಮಗಾರಿಗಳ ಬಗ್ಗೆ ಉನ್ನತ ಮಟ್ಟದ ಪರಿಶೀಲನೆ ಮಾಡಿ ಗುತ್ತಿಗೆದಾರನ ಮೇಲೆ ಕ್ರಮವಹಿಸಬೇಕು. ಜಿ+2 ಪಿ.ಎಮ್ ಆವಾಸ್ ಯೋಜನೆಯು ಕಡು ಬಡವರಿಗಾಗಿ ಇರುವ ಯೋಜನೆಯಾಗಿದ್ದು, ಮನೆ ಇಲ್ಲದಂತವರಿಗೆ ನೀಡುವ ಯೋಜನೆಯಾಗಿದೆ. 840 ಫಲಾನುಭವಿಗಳು 50000 ಸಾವಿರದಿಂದ 70000 ಸಾವಿರದವರೆಗೆ ತುಂಬಿರುವಂತೆ ಕಡು ಬಡವರಿಗೆ ಸರ್ಕಾರದ ಸಿಗಬೇಕಾದ ಯೋಜನೆ.ಆದರೆ ಇದು ಸರ್ಕಾರಕ್ಕೆ ಮೋಸ ಆಗುತ್ತಿದೆ.ಆದ್ದರಿಂದ ಬರುವ ಲೋಕಸಭಾ ಚುನಾವಣೆ ಮೊದಲು ಸರ್ಕಾರದ ಯೋಜನೆ ಫಲಾನುಭವಿಗಳಿಗೆ ಸಿಗದೇ ಇದ್ದಲ್ಲಿ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.