ಶಿರಸಿ: ಶ್ರೀರಾಮನ ಹೆಸರಿನಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಶ್ರೀರಾಮ ಬಿಜೆಪಿಗೆ ಮಾತ್ರ ಸೀಮಿತವಾದ ದೇವರಲ್ಲ.ಸಂಸದರ ಹಿಂದೂತ್ವದ ಪಾಠ ನಮಗೆ ಬೇಕಾಗಿಲ್ಲ ಎಂದು ಯೂತ್ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಕುಮಾರ ಜೋಶಿ ಸೋಂದಾ ಹೇಳಿದರು.
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿ ಆಯೊಜಿಸಿ ಮಾತನಾಡಿದ ಅವರು, ಶ್ರೀರಾಮನ ಬಿಟ್ಟು ಬೇರೆ ದೇವರಿಲ್ಲವಾ? ಕೇಂದ್ರ ಸಚಿವ ನಾರಾಯಣ ರಾಣೆ, ಶಂಕರಾಚಾರ್ಯರು ಹಿಂದೂ ಸಮಾಜಕ್ಕೆ ಏನು ಕೊಡುಗೆ ನೀಡಿದ್ದಾರೆ? ಎಂದು ಪ್ರಶ್ನಿಸಿದ್ದಾರೆ. ಶಂಕರಾಚಾರ್ಯರ ಬಗ್ಗೆ ಅಗೌರವ ತೋರಿಸಿದ ಕೇಂದ್ರ ಸಚಿವರ ಬಗ್ಗೆ ಅನಂತಕುಮಾರ ಹೆಗಡೆ ಯಾಕೆ ಮಾತನಾಡುತ್ತಿಲ್ಲ. ಹಿಂದೂ ಮುಖವಾಡ ಕಳಚಿ ಬಿದ್ದಿದೆ ಎಂಬುದು ಎಲ್ಲರಿಗೂ ಅರ್ಥವಾಗುತ್ತದೆ ಎಂದು ಸಂಸದರ ವಿರುದ್ಧ ಕಿಡಿಕಾರಿದರು.
ದೇಶದ ನಾಲ್ಕು ದಿಕ್ಕಿನಲ್ಲಿ ನಾಲ್ಕು ಪೀಠ ಸ್ಥಾಪಿಸಿದ ಶಂಕರಾಚಾರ್ಯರನ್ನು ಪ್ರಶ್ನೆ ಮಾಡುವ ಹಂತಕ್ಕೆ ಬಿಜೆಪಿ ಬೆಳೆದಿದೆ. 8ನೆಯ ಶತಮಾನದಲ್ಲಿ ಆದಿ ಶಂಕರಾಚಾರ್ಯರು ಕಾಲ್ನಡಿಗೆಯ ಮೂಲಕ ದೇಶ ಸಂಚಾರ ಮಾಡಿ ಹಿಂದೂ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡಿದ್ದಾರೆ. ಅಂತಹ ಪೀಠದ ಬಗ್ಗೆ ಬಿಜೆಪಿ ಅಪಮಾನ ಮಾಡಿದೆ. ರಾಜ್ಯದ ಮುಖ್ಯಮಂತ್ರಿ, ಎಲ್ಲರೂ ಒಪ್ಪಿಕೊಳ್ಳುವ ನಾಯಕ ಸಿದ್ದರಾಮಯ್ಯ ವಿರುದ್ಧ ನಾಲಿಗೆ ಹರಿಬಿಟ್ಟ ಅನಂತಕುಮಾರ ಹೆಗಡೆ ಇದಕ್ಕೆ ಏನು ಉತ್ತರ ನೀಡುತ್ತಾರೆ. ಸಂಸ್ಕಾರದಲ್ಲಿ ನಾನು ಬಂದಿದ್ದೇನೆ ಎಂದು ಹೇಳುವ ಅನಂತಕುಮಾರ ಇದರ ಕುರಿತು ಯಾಕೆ ಮಾತನಾಡುತ್ತಿಲ್ಲ. ಡೋಂಗಿ ರಾಜಕೀಯ ಬದಿಗಿಟ್ಟು ಅಭಿವೃದ್ಧಿ ಬಗ್ಗೆ ಮಾತನಾಡಲಿ ಎಂದು ಸವಾಲು ಹಾಕಿದರು. ಅಭಿವೃದ್ಧಿ ಮಾತನಾಡದೇ, ಹಿಂದುತ್ವವನ್ನು ಮಾತನಾಡುತ್ತಿದ್ದಾರೆ. ಹಿಂದೂತ್ವದ ಸಮಾಜಕ್ಕೆ ಕೊಡುಗೆ ನೀಡಿದ ಶಂಕರಾಚಾರ್ಯರ ವಿರುದ್ಧ ಮಾತನಾಡುವುದು ತಪ್ಪು. ಶಂಕರಾಚಾರ್ಯರ ಪೀಠ ರಾಜಕೀಯಕ್ಕೆ ಸೇರಿಲ್ಲ. ಅಪೂರ್ಣ ಕಟ್ಟಡದಲ್ಲಿ ರಾಮನನ್ನು ಪ್ರತಿಷ್ಠಾಪನೆ ಮಾಡಬಾರದು ಎಂದು ಹೇಳಿದ್ದಾರೆ. ಅದನ್ನೇ ವಿರೋಧ ಮಾಡುವ ಬಿಜೆಪಿ ಸಂಸದರಿಂದ ಹಿಂದೂತ್ವದ ಪಾಠ ನಮಗೆ ಬೇಕಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರಮುಖರಾದ ಬಾಲಚಂದ್ರ ಹೆಗಡೆ ಬಕ್ಕಳ, ಗುರುಪಾದ ಹೆಗಡೆ, ಶ್ರೀಧರ ಹೆಗಡೆ, ಅಕ್ಷಯ ಹೆಗಡೆ ಇದ್ದರು.