ಜೋಯಿಡಾ: ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಂದದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರನ್ನು ಯೋಜನೆ ಮಾಡಬೇಕೆಂದು ಗ್ರಾಮ ಪಂಚಾಯತ್ ಸದಸ್ಯರಾದ ಧವಳೋ ಸಾವರ್ಕರ್ ಮನವಿಯನ್ನು ಮಾಡಿದ್ದಾರೆ.
ಅವರು ಭಾನುವಾರ ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ ಗುಂದದಲ್ಲಿ ಎಂಬಿಬಿಎಸ್ ವೈದ್ಯರ ಸೇವೆ ಇಲ್ಲದ ಕಾರಣ ಅನಾರೋಗ್ಯ ಪೀಡಿತರು, ಆರೋಗ್ಯ ಸಹಾಯಕಿಯರ, ಆಶಾ ಕಾರ್ಯಕರ್ತೆಯರ ಸಣ್ಣ – ಪುಟ್ಟ ಸೇವೆಯಲ್ಲಿ ಬದುಕುವಂತಾಗಿದೆ. ಇಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಸುಸಜ್ಜಿತ ಕಟ್ಟಡ ಹೊಂದಿದ್ದು, ಎಂಬಿಬಿಎಸ್ ವೈದ್ಯರ ಸೇವೆ ಇಲ್ಲದ ಕಾರಣ ಹೆಚ್ಚಿನ ಚಿಕಿತ್ಸೆಗೆ 40ಕಿಮೀ ದೂರದ ದಾಂಡೇಲಿಗೆ ಇಲ್ಲವೇ 30ಕಿಮೀ ದೂರದ ಜೋಯಿಡಾಕ್ಕೆ ತುರ್ತು ಸಂದರ್ಭದಲ್ಲಿ ಖಾಸಗಿ ವಾಹನ ಮಾಡಿಕೊಂಡು ಹೋಗಬೇಕಾಗುತ್ತದೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ವೈದ್ಯರ ನಿಯೋಜನೆಗೆ ಅಗತ್ಯ ಕ್ರಮವನ್ನು ಕೈಗೊಳ್ಳುವಂತೆ ಧವಳೋ ಸಾವರ್ಕರ್ ಮನವಿ ಮಾಡಿದ್ದಾರೆ.