ಕಾರವಾರ: ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಅನಗತ್ಯ ವಿಳಂಬ,ಅನರ್ಹರಿಗೆ ಸೌಲಭ್ಯಗಳ ಮಂಜೂರಾತಿ,ನಿರ್ಲಕ್ಷ್ಯತನ, ಭ್ರಷ್ಟಾಚಾರ ಕುರಿತು ದೂರುಗಳು ಬಂದಲ್ಲಿ ಪ್ರಕರಣ ದಾಖಲಿಸಿ ಉಗ್ರ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಲೋಕಾಯುಕ್ತದ ಲೋಕಾಯುಕ್ತರಾದ ಗೌರವಾನ್ವಿತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಎಚ್ಚರಿಕೆ ನೀಡಿದರು.
ಅವರು ಶುಕ್ರವಾರ ಅಂಕೋಲಾದ ನಾಡವರ ಸಮುದಾಯ ಭವನದಲ್ಲಿ ನಡೆದ ಉತ್ತರ ಕನ್ನಡದ ಜಿಲ್ಲಾಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಹಾಗೂ ಸಾರ್ವಜನಿಕ ಸಮಸ್ಯೆಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವುದೇ ಇಲಾಖೆಯ ವಿರುದ್ಧ ಸಲ್ಲಿಕೆಯಾಗುವ ದೂರುಗಳ ಬಗ್ಗೆ ಪರಿಶೀಲಿಸಲು ಲೋಕಾಯುಕ್ತದಲ್ಲಿ ಆಡಳಿತ, ತಾಂತ್ರಿಕ ಸೇರಿದಂತೆ ಪ್ರತ್ಯೇಕ ವಿಭಾಗಗಳಿದ್ದು ಅವುಗಳ ಮೂಲಕ ಸತ್ಯಶೋಧನೆ ನಡೆಸಲಾಗುವುದು. ಸರ್ಕಾರಿ, ಅರೆ ಸರ್ಕಾರಿ, ನಿಗಮ,ಮಂಡಳಿಗಳ ನೌಕರರು ಲೋಕಾಯುಕ್ತ ವ್ಯಾಪ್ತಿಯಲ್ಲಿ ಬರಲಿದ್ದು, ಕರ್ತವ್ಯದಲ್ಲಿ ಭ್ರಷ್ಟತೆ, ಸಾರ್ವಜನಿಕ ಹಣದ ದುರುಪಯೋಗ, ಕಾಮಗಾರಿಗಳಲ್ಲಿ ಭ್ರಷ್ಟತೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದ ಅವರು , ಸರ್ಕಾರವು ತನ್ನ ಸಿಬ್ಬಂದಿಗೆ ಉತ್ತಮ ವೇತನ, ಸೌಲಭ್ಯಗಳನ್ನು ನೀಡುತ್ತಿದ್ದು ಪ್ರಾಮಾಣಿಕ ವಾಗಿ ಸಾರ್ವಜನಿಕರಿಗೆ ಸೇವೆಗಳನ್ನು ಒದಗಿಸಿ ಎಂದರು.
ಜಿಲ್ಲೆಯ ತಾ.ಪಂಚಾಯತ್ ಗಳ ಮೂಲಕ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ಪಾರದರ್ಶಕತೆಯಿಂದ ಕೂಡಿರುವಂತೆ ನೋಡಿಕೊಳ್ಳಬೇಕು, ಪಂಚಾಯತ್ ರಸ್ತೆಗಳಲ್ಲಿ ಗುಣಮಟ್ಟ ಇರಬೇಕು.ಅನರ್ಹರಿಗೆ ಸೌಲಭ್ಯ ಒದಗಿಸಬೇಡಿ ಎಂದರು. ಜಲಜೀವನ್ ಮಿಷನ್ ಯೋಜನೆಯಡಿ ಗುಣಮಟ್ಟದ ಪೈಪ್ ಗಳನ್ನು ಬಳಸಿ ಶುದ್ಧ ಕುಡಿಯುವ ನೀರು ಒದಗಿಸಿ, ವಾಟರ್ ಟ್ಯಾಂಕ್ ಗಳನ್ನು ಸ್ವಚ್ಛಗೊಳಿಸಿ, ಕಲುಷಿತ ನೀರು ಸರಬರಾಜು ಬಗ್ಗೆ ದೂರುಗಳು ಬಂದಲ್ಲಿ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಸರ್ಕಾರಿ ಆಸ್ಪತ್ರೆಗಳಿಗೆ ಬರುವವರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಬೇಕು. ಜಿಲ್ಲಾ, ತಾಲ್ಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸ್ವಚ್ಛತೆ ಕಾಪಾಡಬೇಕು, ಫಾರ್ಮಸಿ ಗಳಲ್ಲಿ ವಿತರಿಸುವ ಔಷಧಿ ಗಳ ಬಗ್ಗೆ ದಾಖಲೆ ಇಡಬೇಕು, ಜಿಲ್ಲೆಯ ಅಂಕೋಲ, ಕುಮಟಾ,ಕಾರವಾರ ಆಸ್ಪತ್ರೆಯಲ್ಲಿ ಈ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಲೋಕಾಯುಕ್ತ ಎಸ್ಪಿಗೆ ನಿರ್ದೇಶನ ನೀಡಿದರು.
ತಾಲೂಕು ಕಚೇರಿಗಳಲ್ಲಿ ಪೌತಿ ಖಾತೆ, ಈ ಸ್ವತ್ತು,ಖಾತೆ ವರ್ಗಾವಣೆ ಪ್ರಕರಣಗಳನ್ನು ಹಾಗೂ ಭೂ ದಾಖಲೆಗಳ ಅರ್ಜಿಗಳನ್ನು ಕೂಡಲೇ ವಿಲೇ ಮಾಡಬೇಕು, ಸಕಾಲದಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನು ಪರಿಶೀಲಿಸಿ,ಅಗತ್ಯ ದಾಖಲೆಗಳನ್ನು ಪಡೆದು ಸೌಲಭ್ಯಗಳನ್ನು ಒದಗಿಸಿ, ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವ ಅಧಿಕಾರಿಗಳನ್ನು ಲೋಕಾಯುಕ್ತ ದ ವತಿಯಿಂದ ಅಭಿನಂದಿಸಲಾಗುವುದು ಎಂದರು.
ಜಿಲ್ಲೆಯಲ್ಲಿನ ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡಗಳ ಬಗ್ಗೆ ಮತ್ತು ಅವುಗಳ ದುರಸ್ತಿಗೆ ಕಳೆದ ಒಂದು ವರ್ಷದಿಂದ ಕೈಗೊಂಡಿರುವ ಕ್ರಮಗಳ ಬಗ್ಗೆ ddpiಗಳು ವರದಿ ಸಲ್ಲಿಸಬೇಕು. ಶಾಲಾ ಶಿಕ್ಷಣ ಇಲಾಖೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಯಾವುದೇ ಭ್ರಷ್ಟಾಚಾರ ಕಂಡು ಬಂದಲ್ಲಿ ಹಾಗೂ ಅತಿಥಿ ಶಿಕ್ಷಕರ ನೇಮಕದಲ್ಲಿ ಬೊಗಸ್ ಬಿಲ್ ಸೃಷ್ಟಿ ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದ ಅವರು ಎಲ್ಲಾ ಇಲಾಖೆಯಲ್ಲಿ ಅಧೀನ ಸಿಬ್ಬಂದಿಗಳು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುವಂತೆ ನಿಗಾವಹಿಸುವುದು ಅಧಿಕಾರಿಗಳ ಜವಾಬ್ದಾರಿ ಎಂದರು.
ಸಹಕಾರ ಸಂಘದಲ್ಲಿ ಅವ್ಯವಹಾರಗಳು ನಡೆಯದಂತೆ ಸಹಕಾರ ಇಲಾಖೆ ಯಿಂದ ಪರಿಶೀಲಿಸಬೇಕು , ಹಾಸ್ಟೆಲ್ ಗಳಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಅಗತ್ಯ ಮೂಲಭೂತ ಸೌಕರ್ಯಗಳು ಉತ್ತಮ ಗುಣಮಟ್ಟದಿಂದ ಇರುವಂತೆ ನೀಡಿಕೊಳ್ಳಬೇಕು ಹಾಗೂ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಮತ್ತು ಉತ್ತಮ ಆರೋಗ್ಯಕ್ಕೆ ಪೂರಕವಾದ ಚಟುವಟಿಕೆಗಳನ್ನು ಕೈಗೊಳ್ಳಬೇಕು ಈ ಬಗ್ಗೆ ಜಿಲ್ಲಾ ಲೋಕಾಯುಕ್ತ ಎಸ್ಪಿ ಪರಿಶೀಲಿಸಿ ವರದಿ ನೀಡಿ ಎಂದರು.
ಜಿಲ್ಲೆಯ ಅರಣ್ಯ ಪ್ರದೇಶವನ್ನು ಇನ್ನಷ್ಟು ಬೆಳೆಸಬೇಕು. ಜಿಲ್ಲೆಯಲ್ಲಿ 2118 ಕೆರೆಗಳನ್ನು ಗುರುತಿಸಿ ಸರ್ವೇ ಮಾಡಲಾಗಿದ್ದು,ಅವುಗಳಲ್ಲಿ ಅತಿಕ್ರಮಣಗೊಂಡಿದ್ದ 274 ಕೆರೆಗಳನ್ನು ತೆರೆಗೊಳಿಸಲಾಗಿದ್ದು ಅರಣ್ಯದ ಒಳಗೆ ಇರುವ ಕೆರೆಗಳ ಬಗ್ಗೆ ಸರ್ವೇ ಮಾಡಿ ಅತಿಕ್ರಮಣ ವಾಗಿದ್ದಲ್ಲಿ ಕೂಡ ಅವುಗಳನ್ನು ತೆರವಗೊಳಿಸುವಂತೆ ತಿಳಿಸಿದ ಅವರು ಅರಣ್ಯ ಮತ್ತು ವನ್ಯಜೀವಿಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನಿರ್ಮಾಣ ಮಾಡುವ ಹೊಣೆಗಾರಿಕೆ ಅರಣ್ಯ ಇಲಾಖೆಯ ಮೇಲಿದ್ದು ಇದರಲ್ಲಿ ಯಾವುದೇ ಲೋಪ ಉಂಟಾಗದAತೆ ಕರ್ತವ್ಯ ನಿರ್ವಹಿಸಬೇಕು ಅರಣ್ಯದಲ್ಲಿ ಬಿದ್ದಿರುವ ಮರಗಳ ಬದಲಿಗೆ ಹೊಸ ಗಿಡಗಳನ್ನು ನೆಟ್ಟು ಅರಣ್ಯವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಬೇಕು ಎಂದರು .
ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಚಿಲ್ಲರೆ ಅಂಗಡಿಯಲ್ಲಿ, ಧಾಭಾಗಳಲ್ಲಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಸಲ್ಲಿಕೆಯಾಗಿದ್ದು ಈ ಕುರಿತಂತೆ ಅಬಕಾರಿ ಇಲಾಖೆಯಿಂದ ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದ ಅವರು ಅಬಕಾರಿ ಲೈಸೆನ್ಸ್ ನ ದುರುಪಯೋಗವಾಗದಂತೆ ತಡೆಯಬೇಕು ಹಾಗೂ ಅಬಕಾರಿ ಕಾನೂನು ಉಲ್ಲಂಘಿಸುವವರು ಲೈಸೆನ್ಸ್ ಗಳನ್ನು ರದ್ದುಗೊಳಿಸುವಂತೆ ಸೂಚನೆ ನೀಡಿದರು . ಜಿಲ್ಲೆಯ ಎಲ್ಲಾ ಅಧಿಕಾರಿಗಳು ಜಿಲ್ಲೆಯ ಲ್ಲಿ ಉತ್ತಮ , ಪಾರದರ್ಶಕ ಆಡಳಿತ ವ್ಯವಸ್ಥೆ ನಿರ್ಮಾಣ ಮಾಡುವ ಸಾರ್ವಜನಿಕರಿಗೆ ಪ್ರಾಮಾಣಿಕ ಸೇವೆ ಒದಗಿಸಿ ಜಿಲ್ಲೆಯನ್ನು ಮಾದರಿಯನ್ನಾಗಿ ರೂಪಿಸಬೇಕು ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಜಿಲ್ಲಾ ಪಂಚಾಯತ್ ಸಿಇಒ ಈಶ್ವರ ಕುಮಾರ ಕಾಂದು , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಲೋಕಾಯುಕ್ತ ಎಸ್ ಪಿ ಕುಮಾರ ಚಂದ್ರ, ಅಪರ ಜಿಲ್ಲಾಧಿಕಾರಿ, ಪ್ರಕಾಶ್ ರಾಜಪೂತ್ ಉಪಸ್ಥಿತರಿದ್ದರು. ಜಿಲ್ಲೆಯ ಎಲ್ಲಾ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು