ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾದ ದಕ್ಷಿಣ ಭಾರತದ ಕ್ಷೇತ್ರೀಯ ವೇದ ಸಮ್ಮೇಳನಕ್ಕೆ ಜ.13ರಂದು ಚಾಲನೆ ಸಿಗಲಿದೆ.
ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀರಾಜರಾಜೇಶ್ವರೀ ವಿದ್ಯಾ ಸಂಸ್ಥೆ ಮತ್ತು ಉಜ್ಜಯಿನಿ ಮಹರ್ಷಿ ಸಾಂದೀಪನಿ ರಾಷ್ಟ್ರಿಯ ವೇದವಿದ್ಯಾ ಪ್ರತಿಷ್ಠಾನ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಈ ಕಾರ್ಯಕ್ರಮವು ಜ.13ರಂದು ಸ್ವರ್ಣವಲ್ಲೀ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಹಾಗೂ ಕೂಡಲಿ ಶೃಂಗೇರಿ ಮಹಾಸಂಸ್ಥಾನದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಅಭಿನವ ಶಂಕರ ಭಾರತೀ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಉದ್ಘಾಟನೆ ಆಗಲಿದೆ. ಅತಿಥಿಗಳಾಗಿ ಶಾಸಕ ಶಿವರಾಮ ಹೆಬ್ಬಾರ್, ಉಜ್ಜಯಿನಿಯ ಮಹರ್ಷಿ ಸಾಂದೀಪನಿ ರಾಷ್ಟ್ರಿಯ ವೇದವಿದ್ಯಾ ಪ್ರತಿಷ್ಠಾನದ ಉಪಾಧ್ಯಕ್ಷ ಪ್ರೊ. ಪ್ರಫುಲ್ಲಕುಮಾರ ಮಿಶ್ರ, ಕಾರ್ಯದರ್ಶಿ ಪ್ರೋ| ವಿರೂಪಾಕ್ಷ ವಿ. ಜಡ್ಡೀಪಾಲ, ಮಾಜಿ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಯಲ್ಲಾಪುರದ ಧಾತ್ರೀ ಪೌಂಡೇಶನ್ ಅಧ್ಯಕ್ಷ ಶ್ರೀನಿವಾಸ ಭಟ್ಟ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಬೆಂಗಳೂರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೋ| ಕಾ. ಈ. ದೇವನಾಥನ್ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಸಂಜೆ ಶೋಭಾಯಾತ್ರೆ: ಚತುರ್ವೇದಗಳ ಮಹತ್ವವನ್ನು ಜನಮಾನಸಕ್ಕೆ ತಲುಪಿಸುವ ಉದ್ದೇಶದಿಂದ ಜ.13ರ ಸಂಜೆ 4 ಘಂಟೆಯಿಂದ ಶಿರಸಿ ನಗರದಲ್ಲಿ ವೇದಶೋಭಾ- ಆಯೋಜಿಸಲಾಗಿದೆ. ಶಿರಸಿಯ ಮಾರಿಕಾಂಬಾ ದೇವಾಲಯದಿಂದ ಆರಂಭಗೊಂಡು ಶಿವಾಜಿ ಚೌಕ, ಸಿ. ಪಿ. ಬಝಾರ್, ದೇವಿಕೆರೆ ಮಾರ್ಗವಾಗಿ ಸಾಗಿ ಯೋಗಮಂದಿರದಲ್ಲಿ ಸಮಾಪ್ತಿಗೊಳ್ಳಲಿದೆ. ಈ ವಿಶಿಷ್ಟ, ವಿನೂತನ ವೇದಮಾತೆಯ ಸೇವಾ ಕೈಂಕರ್ಯದ ಶೋಭಾಯಾತ್ರೆಯಲ್ಲಿ ಸ್ವರ್ಣವಲ್ಲೀ ಮಹಾಸ್ವಾಮಿಗಳು, ಕೂಡಲಿ ಶೃಂಗೇರಿ ಮಹಾಸಂಸ್ಥಾನದ ಶ್ರೀ ಅಭಿನವ ಶಂಕರ ಭಾರತೀ ಮಹಾಸ್ವಾಮಿಗಳು ಮತ್ತು ಸಿದ್ದಾಪುರದ ಶ್ರೀಮನ್ನೆಲೆಮಾವಿನಮಠದ ಶ್ರೀಮಾಧವಾನಂದ ಭಾರತೀ ಮಹಾಸ್ವಾಮಿಗಳು ಸಾನ್ನಿಧ್ಯ ನೀಡಲಿದ್ದಾರೆ. ವೈದಿಕರು, ವಿದ್ವಾಂಸರು, ವಿದ್ಯಾರ್ಥಿಗಳು, ಮಾತೆಯರು, ವೇದಾಭಿಮಾನಿಗಳು, ಆಸ್ತಿಕ ಮಹನೀಯರು ಸಹಸ್ರಾರು ಸಂಖ್ಯೆಯಲ್ಲಿ ಶೋಭಾಯಾತ್ರೆಯಲ್ಲಿ ಭಾಗವಹಿಸಲು ಮನವಿ ಮಾಡಲಾಗಿದೆ. ಮೂರು ದಿನಗಳ ಕಾಲ ಸ್ವರ್ಣವಲ್ಲೀ ಮಠದಲ್ಲಿ ವೇದಪಾರಾಯಣ, ವಿದ್ವಾಂಸರಿಗೆ ಸಂಮಾನ, ಗೋಷ್ಠೀ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಮಾರೋಪ ಸಮಾರಂಭಗಳು ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.