ಸಿದ್ದಾಪುರ: ತಾಲೂಕಿನ ಹೆಗ್ಗರಣಿಯ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಅನ್ನಪೂರ್ಣ ಸಭಾಂಗಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಸಿದ್ದಾಪುರ, ಅಖಿಲ ಕರ್ನಾಟಕ ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆ, ರಾಜ್ಯ ಮದ್ಯಪಾನ ಸಂಯಮ ಮಂಡಳಿ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಒಂದು ವಾರಗಳ ಕಾಲ ನಡೆದ 1782ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ಗುರುವಾರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಬೆಳ್ತಂಗಡಿಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷ ರಾಜಣ್ಣ ಕೊರವಿ ಮಾತನಾಡಿ ಸಮಾಜದಲ್ಲಿ ಒಳ್ಳೆಯ ಗೌರವ, ಸ್ಥಾನಮಾನ ದೊರಕಬೇಕಾದರೆ ಪಾನಮುಕ್ತರಾಗಿ ಜೀವನ ನಡೆಸುವುದರ ಜತೆಗೆ ದುಶ್ಚಟಕ್ಕೆ ಒಳಗಾದವರನ್ನು ಒಳ್ಳೆಯದಾರಿಗೆ ತರುವ ಕೆಲಸ ಮಾಡಬೇಕು. ಡಾ.ವೀರೇಂದ್ರ ಹೆಗ್ಗಡೆ ಕಂಡ ಕನಸು ನನಸಾಗಬೇಕಾದರೆ ಸ್ವಸ್ಥ ಸಮಾಜ ನಿರ್ಮಾಣವಾಗಬೇಕಾದರೆ ಪಾನಮುಕ್ತ ಸಮಾಜ ಆಗಬೇಕು. ಸರ್ಕಾರದ ವಿರುದ್ಧ ಹೋರಾಡಿದರೆ ಏನು ಪ್ರಯೋಜನ ಇಲ್ಲ. ಜನರನ್ನು ಜಾಗೃತರನ್ನಾಗಿ ಮಾಡಿದರೆ ಎಲ್ಲ ಕಡೆ ಮದ್ಯಮುಕ್ತ ಸಮಾಜ ನಿರ್ಮಾಣವಾಗುತ್ತದೆ. ರಾಜ್ಯ ಅಬಕಾರಿ ಇಲಾಖೆ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿಯೂ ಎಂಎಸ್ಐಎಲ್ ಮದ್ಯದಂಗಡಿ ತೆಗೆಯಲು ಮುಂದಾಗಿತ್ತು. ಆದರೆ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮುಖ್ಯಮಂತ್ರಿ ಅವರಿಗೆ ಹಾಗೂ ಅಬಕಾರಿ ಸಚಿವರಿಗೆ ಮನವಿ ಮಾಡಿಕೊಂಡಿದ್ದರಿಂದ ಅಬಕಾರಿ ಇಲಾಖೆ ತನ್ನ ಆದೇಶವನ್ನು ಹಿಂದಕ್ಕೆ ಪಡೆದುಕೊಂಡಿದೆ. ನಮ್ಮ ದೇಶದಲ್ಲಿ ಧರ್ಮ, ಸಂಸ್ಕೃತಿ, ಸಂಸ್ಕಾರ ಉಳಿಯಲು ಮಹಿಳೆಯರು ಮುಖ್ಯಕಾರಣ. ಮಹಿಳೆಯರು ಜಾಗೃತರಾಗಬೇಕಾಗಿದೆ. ಶಿಬಿರಾರ್ಥಿಗಳು ಕುಡಿತ ಮರೆತು ಉತ್ತಮ ವ್ಯಕ್ತಿಯಾಗಿ, ಸಮಾಜದಲ್ಲಿ ವ್ಯಕ್ತಿಯಾಗಿ, ಶಕ್ತಿಯಾಗಿ ಬೆಳೆಯಬೇಕೆಂದರು.
ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಕಾಳಿಂಗರಾಜ್ ಎಂ.ಎಸ್.ಮಾತನಾಡಿ ನಮ್ಮ ವ್ಯಕ್ತಿತ್ವವನ್ನು ಉಳಿಸಿಕೊಳ್ಳಬೇಕಾದರೆ, ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬೇಕಾದರೆ ದುಶ್ಚಟದಿಂದ ದೂರ ಇರಬೇಕಾಗಿದೆ. ಕುಡಿತವನ್ನು ಬಿಟ್ಟು ಹೊಸ ಜೀವನದ ಮೂಲಕ ಹೊಸ ಬೆಳಕು ಮೂಡಿಸುವಂತಾಗಬೇಕೆಂದರು. ಹೆಗ್ಗರಣಿ ಪ್ರೌಢಶಾಲೆಯ ಅಧ್ಯಕ್ಷ ನಾರಾಯಣ ಭಟ್ಟ ಧರೆ, ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಎಲ್.ಭಟ್ಟ, ಗ್ರಾಪಂ ಅಧ್ಯಕ್ಷರಾದ ಅನ್ನಪೂರ್ಣ ಚನ್ನಯ್ಯ, ಪದ್ಮಾವತಿ ಎಂ.ಗೌಡ, ಯಂಕಾ ಹುಲಿಯಾ ಗೌಡ, ಅನಿತಾ ನಾಯ್ಕ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ರಾಮು ಕಿಣಿ, ರಮೇಶ ಹೆಗಡೆ ಹಾರ್ಸಿಮನೆ, ಲಕ್ಷ್ಮಿ ರಾಜ್, ಸುಧಾ ಶಿವಪ್ರಕಾಶ, ಯೋಗ ಶಿಕ್ಷಕ ಗಣಪತಿ ಹೆಗಡೆ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಮೇಶ ರಾಮಾ ಗೌಡ, ಶಿಬಿರಾಧಿಕಾರಿಗಳಾದ ಗಣೇಶ ಆಚಾರ್ಯ, ನಾಗೇಂದ್ರ ಇತರರಿದ್ದರು. ಶಿಬಿರಾರ್ಥಿಗಳಾದ ಸುರೇಶ ಹಾಗೂ ಚಂದ್ರಶೇಖರ ಅನಿಸಿಕೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ನವಜೀವನ ಸಮಿತಿ ಸದಸ್ಯರಾಗಿ ಉತ್ತಮ ಕಾರ್ಯನಿರ್ವಹಿಸುತ್ತಿರುವವರಿಗೆ ಜಾಗೃತಿ ಅಣ್ಣ ಹಾಗೂ ಜಾಗೃತಿ ಮಿತ್ರ ಪ್ರಶಸ್ತಿ ನೀಡಿ ಮತ್ತು ವಿಶೇಷ ಸೇವೆ ಸಲ್ಲಿಸಿದವರನ್ನು ಗೌರವಿಸಲಾಯಿತು. ವ್ಯವಸ್ಥಾಪನಾ ಸಮಿತಿಯ ಗೌರವಾಧ್ಯಕ್ಷ ಸುಭಸ ಎಚ್. ನಾಯ್ಕ, ಯೋಜನಾಧಿಕಾರಿ ಪ್ರಭಾಕರ ನಾಯ್ಕ, ಮಹದೇವ ಬಿ, ರೇಖಾ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.