ಶಿರಸಿ: ಶ್ರೀ ಅಖಿಲ ಹವ್ಯಕ ಮಹಾಸಭಾದಿಂದ ಹವ್ಯಕ ಸಮಾಜದ ಪ್ರತಿಭೆಗಳ ಅನಾವರಣ, ಸಾಧನೆಗೆ ಸಮ್ಮಾನ, ವಿದ್ಯಾ ಪ್ರೋತ್ಸಾಹ ಧನ ವಿತರಣೆಯ ಕಾರ್ಯಕ್ರಮ ಜ.21ರಂದು ನಗರದ ಲಯನ್ಸ ಶಾಲೆಯ ಸಭಾಭವನದಲ್ಲಿ ಬೆಳಿಗ್ಗೆ 9.30 ರಿಂದ ಸಂಜೆ 6 ರ ತನಕ ನಡೆಯಲಿದೆ ಎಂದು ಮಹಾ ಸಭೆಯ ನಿರ್ದೇಶಕ ಶಶಾಂಕ ಹೆಗಡೆ ಶೀಗೇಹಳ್ಳಿ ತಿಳಿಸಿದರು.
ನಗರದ ಪೂಗ ಭವನದಲ್ಲಿ ಗುರುವಾರ ಸುದ್ಧಿಗೋಷ್ಠಿ ನಡೆಸಿ ಮಾಹಿತಿ ನೀಡಿ, ಈ ಬಾರಿಯ ಪ್ರತಿಬಿಂಬ ಕಾರ್ಯಕ್ರಮದಲ್ಲಿ ಅನೇಕ ವಿಶೇಷತೆಗಳಿವೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಕಾಸರಗೋಡು, ಬೆಂಗಳೂರು ಜಿಲ್ಲೆಗಳಲ್ಲಿ ಪ್ರಾಂತ್ಯದ ಸ್ಪರ್ಧೆ ನಡೆಸಿ ಅಲ್ಲಿ ನಡೆದ ನಿಗದಿತ ಸ್ಪರ್ಧೆಯಲ್ಲಿ ವಿಜೇತರಾದವರನ್ನು ಬೆಂಗಳೂರಿನಲ್ಲಿ ನಡೆಯುವ ಪ್ರತಿಬಿಂಬ ಮೆಘಾ ಫೈನಲ್‌ಗೆ ಆಹ್ವಾನಿಸಿ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶ ಮಹಾಸಭೆಯದ್ದಾಗಿದೆ. ಪ್ರಾಂತ್ಯವಾರು ಪ್ರತಿಬಿಂಬದ ಭಗವದ್ಗೀತೆ, ಭಾವಗೀತೆ, ರಂಗೋಲಿ, ಸಂಪ್ರದಾಯ ಗೀತೆ, ಪಾಯಸ ಕುಡಿಯುವ ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ ಬಹುಮಾನ ಪಡೆದ ಸ್ಪರ್ಧಿಗಳನ್ನು ಬೆಂಗಳೂರಿನಲ್ಲಿ ನಡೆಯುವ ಪ್ರತಿಬಿಂಬ ಆಯ್ಕೆ ಮಾಡಲಾಗುತ್ತದೆ ಎಂದರು.
ವಿವಿಧ ಸ್ಪರ್ಧೆ: ವರ್ಷದ ಒಳಗಿನ ಮಕ್ಕಳಿಗೆ ಛದ್ಮವೇಷ, ಶ್ಲೋಕ ಪಠಣ, ಚೆಂಡು ಎಸೆತ, 7 ರಿಂದ 12 ವರ್ಷದೊಳಗಿನ ಮಕ್ಕಳಿಗೆ 10ನೇ ಅಧ್ಯಾಯದ 15 ಶ್ಲೋಕಗಳು, ಹಬ್ಬದ ಕುರಿತಾದ ಚಿತ್ರಕಲೆ, ಕೆರೆದಡ, 13 ರಿಂದ 18 ವರ್ಷದವರೆಗೆ ಭಾವಗೀತೆ, ಆಶುಭಾಷಣ, ಸಂಗೀತ ಖುರ್ಚಿ, 18 ವರ್ಷ ಮೇಲ್ಪಟ್ಟು ಸಾಮಾನ್ಯ ವಿಭಾಗದಲ್ಲಿ ಹವಿ ರುಚಿ ಹಲ್ವಾ, 3 ಜನಕ್ಕೆ ಅವಕಾಶ ಇರುವ ಸಂಪ್ರದಾಯ ಗೀತೆ, ಚುಕ್ಕಿ ರಂಗೋಲಿ, ಆರತಿತಟ್ಟೆ, ಪಾಯಸ ಕುಡಿಯುವ ಸ್ಪರ್ಧೆ ನಡೆಯಲಿದೆ. ಚಿತ್ರಕಲೆ ಸ್ಪರ್ಧೆಗೆ ಬಣ್ಣ ಸ್ಪರ್ಧಿಗಳೇ ತರಬೇಕು, ಮನೆಯಲ್ಲಿ ಹಲ್ವಾ, ಆರತಿ ತಟ್ಟೆ ತಯಾರಿಸಿ ತರಬಹುದು, ಎಲ್ಲ ಸ್ಪರ್ಧೆಗಳಿಗೆ ಹವ್ಯಕರಿಗೆ ಮಾತ್ರ ಅವಕಾಶ ಎಂದು ತಿಳಿಸಿದರು.
ಉದ್ಘಾಟನೆ, ಸಮ್ಮಾನ: ಅಂದು ಬೆಳಿಗ್ಗೆ 9.30ಕ್ಕೆ ಶಾಸಕ ಭೀಮಣ್ಣ ನಾಯ್ಕ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಮಹಾಸಭೆಯ ಉಪಾಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ವಹಿಸಿಕೊಳ್ಳುವರು. ಅತಿಥಿಗಳಾಗಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ, ಸಮಾಜ ಸೇವಕ ಅನಂತಮೂರ್ತಿ ಹೆಗಡೆ, ಲಯನ್ಸ ಉಪಾಧ್ಯಕ್ಷ ಕೆ.ಬಿ.ಲೋಕೇಶ ಹೆಗಡೆ ಪ್ರಗತಿ ಭಾಗವಹಿಸುವರು. ಬಳಿಕ ವಿವಿಧ ಸ್ಪರ್ಧೆಗಳು ಆರಂಭವಾಗಲಿದೆ. ಸಂಜೆ 4 ಕ್ಕೆ ಭಾರ್ಗವ ಹೆಗಡೆ ತಂಡದಿಂದ ಸಿತಾರ ವಾದನ ನಡೆಯಲಿದ್ದು, ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಹಾ ಸಭೆಯ ಉಪಾಧ್ಯಕ್ಷ ಶ್ರೀಧರ ಜೆ.ಭಟ್ಟ ಕೆಕ್ಕಾರು ವಹಿಸಿಕೊಳ್ಳುವರು. ಅತಿಥಿಗಳಾಗಿ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಶಿವರಾಮ ಹೆಬ್ಬಾರ್, ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಲಯನ್ಸ ಅಧ್ಯಕ್ಷ ಪ್ರಭಾಕರ ಹೆಗಡೆ ಭಾಗವಹಿಸಲಿದ್ದಾರೆ. ಸುಮಾರು 2 ಲಕ್ಷ ರೂಪಾಯಿಗೂ ಅಧಿಕ ವಿದ್ಯಾ ಪ್ರೋತ್ಸಾದಧನ ವಿತರಿಸಲಾಗುತ್ತದೆ ಎಂದು ತಿಳಿಸಿದರು. ಈ ವೇಳೆ ಪ್ರತಿಬಿಂಬದ ಸಂಚಾಲಕ ವಿ.ಎಂ.ಹೆಗಡೆ ಹಲಗೇರಿ, ಲಯನ್ಸ ಸಂಸ್ಥೆಯ ಪ್ರಮುಖ ಕೆ.ಬಿ.ಲೋಕೇಶ ಹೆಗಡೆ ಇತರರು ಇದ್ದರು.
ಹವ್ಯಕ ಸಮುದಾಯವದರು ವಿವಿಧ ಸ್ಪರ್ಧೆಗಳಿಗೆ ಹೆಸರು ನೊಂದಾಯಿಸಲು ಜ.18 ಕಡೆ ದಿನವಾಗಿದೆ. ಆಸಕ್ತರು TEL:+918660785072, TEL:+919880236017, TEL:+919148459191 ಗೆ ಸಂಪರ್ಕ ಮಾಡಬಹುದಾಗಿದೆ. – ಶಶಾಂಕ ಹೆಗಡೆ, ಶೀಗೇಹಳ್ಳಿ, ಮಹಾಸಭೆ ನಿರ್ದೇಶಕರು
ಪ್ರತಿಬಿಂಬ ಸಮಾರೋಪದಲ್ಲಿ ಕಾರ್ಯಕ್ರಮದಲ್ಲಿ ಮಕ್ಕಳ ತಜ್ಞ ಡಾ. ಎನ್.ಆರ್.ಹೆಗಡೆ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಾರಾಯಣ ಪಿ.ಭಾಗವತ್, ಪ್ರಗತಿಪರ ಕೃಷಿಕ, ಸಿತಾರ ವಾದಕ ಭಾರ್ಗವ ಹೆಗಡೆ ಶೀಗೇಹಳ್ಳಿ ಹಾಗೂ ಯಕ್ಷಗಾನ ಕಿಶೋರ ಕಲಾವಿದೆ ತುಳಸಿ ಹೆಗಡೆ ಅವರನ್ನು ಸಮ್ಮಾನಿಸಲಾಗುತ್ತಿದೆ. – ಕೆ.ಬಿ.ಲೋಕೇಶ ಹೆಗಡೆ, ಸಂಘಟಕ ಪ್ರಮುಖ