ಕಾರವಾರ: ಸುಳ್ಳು, ಗಲಭೆ, ದೇವರ ಹೆಸರಲ್ಲಿ ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುವುದೇ ಬಿಜೆಪಿಯ ಅಜಂಡವಾಗಿದೆ ಎಂದು ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಆಕ್ರೋಶ ಹೊರಹಾಕಿದರು.
ನಗರಕ್ಕೆ ಭೇಟಿ ನೀಡಿದ್ದ ವೇಳೆ ಮಾತನಾಡಿದ ಅವರು, ಬಿಜೆಪಿಯವರು ಗಲಭೆ ಮಾಡಿಯೇ ಚುನಾವಣೆ ಗೆಲ್ಲುವುದು. ಅವರು ಚುನಾವಣೆಗೋಸ್ಕರ ಏನು ಬೇಕಾದರೂ ಮಾಡುತ್ತಾರೆ ಎಂದರು. ಅಯೋಧ್ಯಾ ರಾಮಮಂದಿರ ಉದ್ಘಾಟನೆ, ಪೂಜೆ ಆಗದೇ ಮಂತ್ರಾಕ್ಷತೆ ಕೊಡುತ್ತಿದ್ದಾರೆ. ಅಕ್ಷತೆ, ಮಂತ್ರಾಕ್ಷತೆ ಕೊಟ್ಟು ಕರೆಯುವುದೇನೋ ಸರಿ, ಮೋದಿ, ಯೋಗಿ ಪೋಟೋ ಹಾಕಿ ಪ್ರಚಾರ ಮಾಡುತ್ತಿದ್ದಾರೆ. ರಾಮನ ನಿಜಭಕ್ತರಾದರೇ ಪಕ್ಷಾತೀತವಾಗಿ ಮಂದಿರ ನಿರ್ಮಿಸಿ, ಲೋಕಾರ್ಪಣೆ ಮಾಡುತ್ತಾರೆ. ಅಕ್ಷತೆ ಕೊಡುವಲ್ಲಿ ಮೋದಿ ವಿಚಾರ ಏಕೆ ಹೇಳುತ್ತಾರೆ, ಹಣವನ್ನು ನಾವೂ ಕೂಡ ಕೊಟ್ಟಿದ್ದೇವೆ. ಬಿಜೆಪಿಯವರದ್ದು ಬೋಗಸ್ ಭಕ್ತಿ. ನಿಜವಾದ ಭಕ್ತರು ಗಲಾಟೆ ಮಾಡುವುದಿಲ್ಲ ಎಂದರು. ಭಟ್ಕಳದಲ್ಲಿ ನಾವು ರಾಮಮಂದಿರ ನಿರ್ಮಾಣ ಮಾಡಿದ್ದೇವೆ. ದೇವರ ಹೆಸರಿನಲ್ಲಿ ಪ್ರಚಾರವನ್ನು ನಾವು ತೆಗೆದುಕೊಂಡಿಲ್ಲ. ಕೇವಲ ಭಕ್ತರಿಗಾಗಿ ನಿರ್ಮಾಣ ಮಾಡಿದ್ದೇವೆ. ದೇವರು, ಧರ್ಮದ ಹೆಸರಿನಲ್ಲಿ ಪ್ರಚಾರ ತೆಗೆದುಕೊಳ್ಳುವುದು ಸರಿಯಲ್ಲ ಎಂದರು.
ಮೂವರು ಡಿಸಿಎಂ ಮಾಡುವ ಬಗ್ಗೆ ಪಕ್ಷದಲ್ಲಿ ಚರ್ಚೆ ನಡೆದಿಲ್ಲ. ಮಾಡುವುದಾದರೆ ಹೈಕಮಾಂಡ್ ತೀರ್ಮಾನ ಅಂತಿಮ. ಅಭಿವೃದ್ಧಿ ದೃಷ್ಟಿಯಿಂದ ಮೂವರು ಡಿಸಿಎಂ ಮಾಡುವುದಾದರೆ ಮಾಡುತ್ತೇವೆ. ಆದರೆ ಈ ಬಗ್ಗೆ ಪ್ರಸ್ತಾವನೆ ಮಾಡಿಲ್ಲ, ಚರ್ಚೆಯನ್ನೂ ಮಾಡಿಲ್ಲ ಎಂದು ಹೇಳಿದರು.