ಯಲ್ಲಾಪುರ: ವಿದ್ಯಾರ್ಥಿ ಜೀವನ ಮಹತ್ವದ, ಬಂಗಾರದ ಕ್ಷಣಗಳು. ಉದಾತ್ತ ಧ್ಯೇಯದಿಂದ ಹಿರಿಯರು ಈ ಸಂಸ್ಥೆ ಆರಂಭಿಸಿ, ಬಡವ, ಬುಡಕಟ್ಟು ಸಮೂದಾಯದ ಮಕ್ಕಳಿಗೆ ವಿದ್ಯೆ ನೀಡುವ ಮಹತ್ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ತಹಶೀಲ್ದಾರ ಎಂ.ಗುರುರಾಜ ಹೇಳಿದರು.
ಪಟ್ಟಣದ ಗ್ರಾಮ ದೇವಿ ದೇವಸ್ಥಾನದ ರಂಗಮಂದಿರದಲ್ಲಿ ನಡೆದ ವಿಠ್ಠಲ ವನವಾಸಿ ವಿದ್ಯಾರ್ಥಿನಿಲಯದ ಮಕ್ಕಳ ವಾರ್ಷಿಕೋತ್ಸವ ಸ್ನೇಹ ಸಮ್ಮಿಳನ ಉದ್ಘಾಟಿಸಿ ಅವರು ಮಾತನಾಡಿ, ನೀವು ಕಲಿಯುವುದನ್ನು ಶ್ರದ್ಧೆಯಿಂದ ಕಲಿಯಿರಿ. ಶಾಲಾಪಠ್ಯದ ಜೊತೆಗೆ ಈ ನೆಲದ ಸಂಸ್ಕೃತಿಯ ಕಲೆಯನ್ನೂ ಕಲಿತು ನಿಮ್ಮ ಪರಂಪರೆ ಜೀವಂತವಾಗಿರಿಸುವ ಕಾರ್ಯ ಮಾಡಿ. ಸುಂದರ ಪರಿಸರದ ರಕ್ಷಣೆಯ ಜೊತೆಗೆ ಅಧ್ಯಯನವನ್ನೂ ಮಾಡಿ ಎಂದರು.
ವನವಾಸಿ ಕಲ್ಯಾಣದ ಜಿಲ್ಲಾ ಉಪಾಧ್ಯಕ್ಷರಾದ ಎಂ.ಟಿ.ಗೌಡ ಮುಖ್ಯ ವಕ್ತಾರರಾಗಿ ಮಾತನಾಡಿ, ಕಾಡಿನಲ್ಲಿ ನಿಕೃಷ್ಠವಾಗಿ ಬದುಕುತ್ತಿರುವ ವನವಾಸಿಗಳನ್ನು ಮುಖ್ಯವಾಹಿನಿಗೆ ತಂದು ರಾಷ್ಟ್ರ ನಿರ್ಮಾಣದಲ್ಲಿ ತರಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪರಿ ಕಲ್ಪನೆಯೇ. ವನವಾಸಿ ಕಲ್ಯಾಣ. ವ್ಯಕ್ತಿತ್ವ ನಿರ್ಮಾಣವೇ ರಾಷ್ಟ್ರ ನಿರ್ಮಾಣ. ಇಲ್ಲಿ ವ್ಯಕ್ತಿಗೆ ಮಹತ್ವವಿಲ್ಲ. ವ್ಯಕ್ತಿತ್ವಕ್ಕೆ ಬೆಲೆ ನೀಡಲಾಗುತ್ತಿದೆ. ಪ್ರತಿಯೊಬ್ಬ ವ್ಯಕ್ತಿ ರಾಷ್ಟ್ರದ ಅಂಶ. ಪ್ರತಿ ಸಮೂದಾಯ ರಾಷ್ಟ್ರ ನಿರ್ಮಾಣದಲ್ಲಿ ಮಹತ್ವ. ಹೀಗಾಗಿ ವನವಾಸಿಗಳಿಗೆ ಮಹತ್ವ ನೀಡಲಾಗಿದೆ ಎಂದರು.
ವನವಾಸಿ ಪ್ರಾಂತ ಕಾರ್ಯದರ್ಶಿ ಎಂ.ಎಲ್.ಸಿ. ಶಾಂತಾರಾಮ ಸಿದ್ಧಿ ಮಾತನಾಡಿ ವ್ಯಕ್ತಿನಿರ್ಮಾಣದ ಕಾರ್ಯ ಮಕ್ಕಳಿರುವಾಗಲೇ ಆಗಬೇಕು ಎನ್ನುವ ನಿಟ್ಟಿನಲ್ಲಿ, ವಿದ್ಯೆ, ಸಂಸ್ಕಾರ, ಶಾರೀರಿಕ ಶಿಕ್ಷಣ ನೀಡುವ ಮೂಲಕ ರಾಷ್ಟ್ರ ಭಕ್ತರನ್ನಾಗಿಸುವ ಕಾರ್ಯ ವನವಾಸಿ ಕಲ್ಯಾಣ ಮಾಡುತ್ತಿದೆ ಎಂದರು. ಡಾ.ಜಿ.ಪಿ. ಭಟ್ಟ ಮದ್ಗುಣಿ ಸ್ಮಾರಕ ಆಯುರ್ ಸೇವಾ ಭವನದ ವೈದ್ಯೆ ಡಾ. ಸುಚೇತಾ ಮದ್ಗುಣಿ ಅರಿಶಿಣ ಕುಂಕುಮದ ಕುರಿತು ಮಾತನಾಡಿದರು.
ವಿದ್ಯಾರ್ಥಿ ನಿಲಯದ ಅಧ್ಯಕ್ಷ ಟಿ.ಆರ್.ಹೆಗಡೆ ತೊಂಡೆಕೆರೆ ಅಧ್ಯಕ್ಷತೆ ವಹಿಸಿದ್ದರು. ಅಡಿಕೆ ವರ್ತಕರ ಸಂಘದ ಅಧ್ಯಕ್ಷ ರವಿ ಹೆಗಡೆ,ಉದ್ಯಮಿ ಸುಬ್ರಾಯ ವಾಳ್ಕೆ, ತೆರಿಗೆ ಸಲಹೆಗಾರ ಎಸ್.ಎಂ. ಭಟ್ಟ ಮಾತನಾಡಿದರು.
ಬುಡಕಟ್ಟು ಸಮಾಜದ ಪಾರಂಪರಿಕ ಕಲೆಯನ್ನು ಉಳಿಸಲು ಶ್ರಮಿಸುತ್ತಿರುವ ಜಕ್ಕೊಳ್ಳಿಯ ಕೀರ್ತನೆಕಾರ ಭುಜಂಗ ಸಿದ್ದಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಸಿದ್ಧಾರ್ಥ ನಂದೊಳ್ಳಿ ಮಠ ಸ್ವಾಗತಿಸಿದರು, ಭಾಸ್ಕರ ಸಿದ್ದಿ ವರದಿ ವಾಚಿಸಿದರು.ನಿಲಯ ಮೇಲ್ವಿಚಾರಕಿ ವೀರಮ್ಮ, ಸಮೀತಿ ಸದಸ್ಯೆ ಸುನಿತಾ ಕೆ.ಎಸ್.ನಿರೂಪಿಸಿದರು.