ಹೊನ್ನಾವರ : ಹವಾಮಾನ ವೈಪರಿತ್ಯದಿಂದ ದಿನಕ್ಕೊಂದು ರೀತಿಯ ವಾತಾವರಣವಿದ್ದು, ಇದು ಗೇರು ಬೆಳೆಯನ್ನೇ ನೆಚ್ಚಿಕೊಂಡಿರುವ ಕರಾವಳಿ ಭಾಗದ ಸಾವಿರಾರು ಮಂದಿ ಗೇರು ಕೃಷಿಕರಿಗೆ ಸಂಕಷ್ಟ ತಂದೊಡ್ಡಿದೆ. ಹೂವು ಬಿಡುವ ಹೊತ್ತಿನಲ್ಲಿಯೇ ವಾತಾವರಣದಲ್ಲಿ ಭಾರೀ ಪ್ರಮಾಣದ ಏರುಪೇರಾಗುತ್ತಿರುವುದು ರೈತರ ನಿದ್ದೆಗೆಡಿಸಿದೆ.
ಈಗಾಗಲೇ ತಾಲೂಕಿನ ಕೆಲವೆಡೆಗಳಲ್ಲಿ ಗೇರು ಮರದಲ್ಲಿ ಹೂವು ಬಿಟ್ಟಿದ್ದು, ಆದರೆ ಭಾರೀ ಪ್ರಮಾಣದಲ್ಲಿ ಹೂವು ಬಿಡುವ ಪ್ರಕ್ರಿಯೆ ಆರಂಭವಾಗಿಲ್ಲ. ಇನ್ನು ಮುಂದಿನ ದಿನಗಳಲ್ಲಿ ಮಳೆ ಹೀಗೆ ಮುಂದುವರಿದರೆ ಗೇರು ಮರ ಚಿಗುರುತ್ತ ಹೋಗಲಿದ್ದು, ಸೆಖೆ ಬೀಳುವವರೆಗೆ ಹೂವು ಬಿಡುವ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆ ಕಡಿಮೆ ಇದೆ.
ವಾತಾವರಣದಲ್ಲಿ ದಿನಕ್ಕೊಂದು ಬದಲಾವಣೆ ಯಾಗುತ್ತಿದ್ದು, ಒಂದು ದಿನ ಮಳೆ, ಮೋಡ, ಚಳಿ, ಸೆಖೆ ಹೀಗೆ ಆಗಾಗ ಏರುಪೇರಾಗುತ್ತಿದೆ. ಇದರಿಂದ ಗೇರು ಸಹಿತ ಹಲಸು, ಮಾವು, ಮತ್ತಿತರ ತೋಟಗಾರಿಕಾ ಬೆಳೆಗಳ ಹೂ-ಕಾಯಿ ಆಗುವ ಪ್ರಕ್ರಿಯೆ ಅಡ್ಡಿಯಾಗುತ್ತಿದೆ. ಹೂವು ಬಿಟ್ಟ ಬಳಿಕ ಮೋಡ ಹೆಚ್ಚಿಗೆ ಇದ್ದರೆ ಅದು ಸಹ ಸಮಸ್ಯೆಯಾಗುತ್ತದೆ. ಇದರಿಂದ ಈ ಬಾರಿಯ ಇಳುವರಿ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನುವ ಆತಂಕ ಕೃಷಿಕರದ್ದಾಗಿದೆ.