ಶಿರಸಿ: ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ತಾಲೂಕಿನ ಬಚಗಾಂವದಲ್ಲಿ ಶನಿವಾರ ಹಮ್ಮಿಕೊಂಡ ಜನಪರ ಉತ್ಸವ ಊರಿನಲ್ಲಿ ಕಳೆ ಗಟ್ಟಿತು. ಒಂದುವರೆ ಕಿಲೋ ಮೀಟರ್ ದೂರದಿಂದ ಅತಿಥಿಗಳನ್ನು ಆತ್ಮೀಯವಾಗಿ ಮೆರವಣಿಗೆಯ ಮೂಲಕ ಬರಮಾಡಿಕೊಳ್ಳಲಾಯಿತು. ಮಾತೆಯರಿಂದ ಪೂರ್ಣ ಕುಂಭ ಸ್ವಾಗತ, ಡೊಳ್ಳು ಕುಣಿತ, ಬೇಡರ ವೇಷಗಳ ಮೂಲಕ ಸ್ವಾಗತಿಸಿಕೊಂಡರು. ಯುವಕರು, ವಯಸ್ಸಾದವರು, ಮಕ್ಕಳು, ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಂಡರು. ತಳಿರು ತೋರಣ, ರಂಗೋಲಿಗಳ ಮೂಲಕ ಊರನ್ನು ಸಿಂಗರಿಸಿ ಮೆರಗು ಹೆಚ್ಚಿಸಿದರು.
ಜನಪರ ಉತ್ಸವಕ್ಕೆ ಉಸ್ತುವಾರಿ ಶಾಸಕ ಭೀಮಣ್ಣ ನಾಯ್ಕ ಚಾಲನೆ ನೀಡಿ, ಕಲೆಯ ಸಂಸ್ಕೃತಿಗಳ ಜಿಲ್ಲೆ ಉತ್ತರ ಕನ್ನಡ. ದೇಶದಲ್ಲೇ ಅತ್ಯಂತ ಸಾಂಸ್ಕೃತಿಕ ಶ್ರೀಮಂತ ಜಿಲ್ಲೆ. ಗ್ರಾಮದ ಜನರ ಜೊತೆ ಸರಕಾರ ಕೂಡ ಕಲೆ ಸಂಸ್ಕೃತಿ ಉಳಿಸಿ ಬೆಳೆಸಬೇಕು. ಕಲೆ ಉಳಿವಿನ ಜವಾಬ್ದಾರಿ ಎಲ್ಲರೂ ಹೊರಬೇಕು ಎಂದರು.
ಇಲಾಖೆಯ ಸಹಾಯಕ ನಿರ್ದೇಶಕ ಡಾ.ರಾಮಚಂದ್ರ ಎಂ ಮಾತನಾಡಿ, ಗ್ರಾಮೀಣ ಭಾಗದ ಕಲೆಗಳನ್ನು ಪ್ರೋತ್ಸಾಹಿಸಬೇಕು. ತಳ ಸಮುದಾಯದ ಕಲಾವಿದರನ್ನು ಬೆಳೆಸಬೇಕು, ವೇದಿಕೆ ನಿರ್ಮಾಣ ಮಾಡಿಕೊಡಬೇಕು ಎಂಬ ಕಾರಣಕ್ಕೆ ಇಂಥ ಉತ್ಸವ ನಡೆಸುತ್ತಿದೆ. ಮುಂದಿನ ಪೀಳಿಗೆಗೆ ಕಲೆ ಉಳಿಸಬೇಕು ಎಂದರು. ಸರಕಾರದ ಕಾರ್ಯಕ್ರಮ ಆಗದೇ ಜನರ ಕಾರ್ಯಕ್ರಮ ಬಚಗಾಂವದಲ್ಲಿ ಆಗಿದೆ. ಇಡೀ ಊರು ಹಬ್ಬದಂತೆ ಸಿಂಗಾರ ಆಗಿದೆ. ನಿಜವಾಗಿ ಜನಪರ ಉತ್ಸವ ಜನಪರವಾಗಿದೆ ಎಂದರು.
ಸೊಸೈಟಿಯ ಅಧ್ಯಕ್ಷ ಎಸ್.ಎನ್ ಹೆಗಡೆ, ಸಾಂಸ್ಕೃತಿಕ ಸಂಭ್ರಮ ಉಳಿಸಿ ಬೆಳೆಸಬೇಕು. ಇಡೀ ಊರಿನಲ್ಲಿ ಸಂಭ್ರಮ ಇದೆ. ಕಲಾ ಸೌರಭ ಇಲ್ಲಿದೆ ಎಂದರು.
ಗ್ರಾ.ಪಂ ಅಧ್ಯಕ್ಷ ತಿರುಮಲೇಶ್ವರ ಮಡಿವಾಳ, ನಮ್ಮೂರಿನಲ್ಲಿ ಇಂಥ ಸಂಭ್ರಮ ನಡೆಸುತ್ತಿದ್ದಾರೆ. ಇದು ಅತ್ಯಂತ ಖುಷಿ ಎಂದರು.
ಜಿ.ಪಂ. ಮಾಜಿ ಸದಸ್ಯೆ ಉಷಾ ಹೆಗಡೆ, ಸ್ಥಳೀಯ ಪಂಚಾಯ್ತಿ ಉಪಾಧ್ಯಕ್ಷೆ ಮೀನಾಕ್ಷಿ ಗೌಡ, ಸದಸ್ಯರಾದ ರಘುಪತಿ ನಾಯ್ಕ, ಶೃತಿ ಕಾನಡೆ, ಸುಮಿತ್ರಾ ಮೇದಾರ, ತಿಮ್ಮಪ್ಪ ನಾಯ್ಕ, ವನಜಾಕ್ಷಿ ಗೌಡ, ಶೀಲಾ ಹೆಬ್ಬಾರ, ಶ್ರೀಮತಿ ರಾಜು, ಇಮ್ತಿಯಾಜ ಖಾದರ, ದೇವರಾಜ ಮರಾಠೆ, ಜ್ಯೋತಿ ಪಾಟೀಲ, ಅಮರ ನೇರಲಕಟ್ಟೆ, ಇಂದೂಧರ ನಾಯ್ಕ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಪ್ರಮುಖರು ಇದ್ದರು. ಶಿರಸಿ ರತ್ನಾಕರ ನಿರ್ವಹಿಸಿದರು. ಪಿಡಿಓ ಪ್ರೀತಿ ಶೆಟ್ಟಿ ವಂದಿಸಿದರು.
ರಂಗೇರಿಸಿದ ಸಾಂಸ್ಕೃತಿಕ ಸಂಭ್ರಮ:
ಬಳಿಕ ಸಹದೇವಪ್ಪ ಕೋರವರ ಸಂಗಡಿಗರಿಂದ ಶಹನಾಯಿ ವಾದನ, ವಿನುತಾ ಹಾಗೂ ಸೀಮಾ ಬಸವರಾಜ ತಂಡದಿಂದ ಸುಗಮ ಸಂಗೀತ, ಪ್ರವೀಣ ಸಂಗಡಿಗರಿಂದ ಕಿನ್ನರ ಜೋಗಿ ಪದಗಳು, ಫಕೀರಪ್ಪ ಭಜಂತ್ರಿ ಸಂಗಡಿಗರು ಮುಂಡಗೋಡು ಪಂಚವಾದ್ಯ, ಸುವರ್ಣ, ಪ್ರದೀಪ ಎನ್ ತಂಡದಿಂದ ಶ್ರೀದೇವಿ ರೂಪಕ ನಡೆದವು. ಚಿಬ್ಬಲಗೇರಿಯ ಪಲ್ಲವಿ ವೈ ತಂಡದಿಂದ ಚನ್ನಭೈರಾದೇವಿ ರೂಪಕ, ಮಾರುತಿ ಮಾದರ ತಂಡದಿಂದ ಡೊಳ್ಳಿನ ಪದಗಳು, ಮುಂಡಗೊಡದ ಶೃತಿ ಲಮಾಣಿ ಬಳಗದಿಂದ ಲಮಾಣಿ ನೃತ್ಯ, ದ್ರೌಪದಿ ಭಜಂತ್ರಿ ತಂಡದಿಂದ ಶ್ರೀಕೃಷ್ಣ ನೃತ್ಯ ರೂಪಕ, ಪರಶುರಾಮ ಹಾವನೂರು ತಂಡದಿಂದ ಜಾನಪದ ನೃತ್ಯ, ವಿನಾಯಕ ಎಚ್ ಕೆ ಡೊಳ್ಳು ನೃತ್ಯ, ಅಕ್ಷಯ ಜೋಗಳೇಕರ ತಂಡದಿಂದ ಬೇಡರ ವೇಷ, ದೇಮಣ್ಣ ತಮ್ಮಣ್ಣ ಬಳಗದಿಂದ ಕರಡಿ ಮಜಲು, ರೇಣುಕಾ ಶಂಕ್ರವ್ವ ಲಾವಣಿ ನೃತ್ಯ ರೂಪಕ, ಶಾಂತಾ ಚೆಲುವಾದಿ ಬಳಗದಿಂದ ಸಮೂಹ ನೃತ್ಯ, ಅಂಬೇಡ್ಕರ ಸಂಘದಿಂದ ಗಾರುಡಿ ಗೊಂಬೆ, ಬಾಬಣ್ಣ ಹುಣಶೆಟ್ಟಿಕೊಪ್ಪ ಕಂಸಾಳೆ, ಪರಶುರಾಮ ಜೋಗಳೇಕರ ಜಾನಪದ ಗೀತ ಗಾಯನ, ಸ್ನೇಹಾ ಚೆಲುವಾದಿ ಜಾನಪದ ನೃತ್ಯ, ಯಲ್ಲವ್ವ ಯಲ್ಲಪುರ ಬಳಗದಿಂದ ಕೋಲಾಟ ಗಮನ ಸೆಳೆದವು.
ದೊಡ್ನಳ್ಳಿ ಗ್ರಾಮ ಪಂಚಾಯ್ತಿ ಸಹಕಾರ ನೀಡಿತ್ತು. ಇದೇ ವೇಳೆ ಬಸವ ಜ್ಯೋತಿ ವಸತಿ ಯೋಜನೆ ಅಡಿ ಫಲಾನುಭವಿಗಳಿಗೆ ಕಾಮಗಾರಿ ಆದೇಶ ನೀಡಲಾಯಿತು.