ಶಿರಸಿ: ರಾಜ್ಯದ ಅತ್ಯಂತ ಶಕ್ತಿ ಸ್ಥಳದಲ್ಲಿ ಒಂದಾದ ದೊಡ್ಡ ಗಣಪತಿ ದೇವರು ಎಂದೇ ಹೆಸರಾದ ಇಲ್ಲಿನ ರಾಯರಪೇಟೆ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಜೀರ್ಣಾಷ್ಟ ಬಂಧ ನಡೆಸಲು ತೀರ್ಮಾನಿಸಲಾಗಿದೆ ಎಂದು ದೇವಸ್ಥಾನದ ಮೊಕ್ತೇಸರರಾದ ಜಿ.ಎಸ್.ಹೆಗಡೆ ಲಿಂಗದಕೋಣ ತಿಳಿಸಿದ್ದಾರೆ.
ಶಿರಸಿಯ ಮಹಾಗಣಪತಿಯು ಶತ ಶತಮಾನಗಳಿಂದ ಭಕ್ತರನ್ನು ಅನುಗ್ರಹಿಸಿ ಇಷ್ಟಾರ್ಥವನ್ನು ಅನುಗ್ರಹಿಸುತ್ತಿದ್ದು, ಸುಮಾರು 900 ವರ್ಷಗಳಷ್ಟು ಪುರಾತನವಾದ ಇತಿಹಾಸ ಹೊಂದಿದೆ. ಕಳೆದ 90 ವರ್ಷಗಳ ಹಿಂದೆ ಅಷ್ಟಬಂಧಾದಿಗಳು ನಡೆದಿದ್ದು, ಇದೀಗ ಜೀರ್ಣಾಷ್ಟಬಂಧ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಜ.8ಕ್ಕೆ ಕಲಾ ಸಂಕೋಚ:
ಪ್ರಕೃತಿ ಸಹಜವಾದ ಶ್ರೀ ದೇವರಲ್ಲಿ ಬಂಧಾದಿ ಭಿನ್ನತ್ವವನ್ನು ಮತ್ತು ಗರ್ಭಗುಡಿಯ ನವೀಕರಣವನ್ನು ಮನಗಂಡು ನಾಡಿನ ಪ್ರಸಿದ್ಧ ಶಿಲ್ಪ ಶಾಸ್ತ್ರಜ್ಞರು, ಆಗಮಿಕರು ಹಾಗೂ ಜ್ಯೋತಿಷಿಗಳ ಸಲಹೆ ಸೂಚನೆಯ ಮೇರೆಗೆ ಶ್ರೀ ಮಹಾಗಣಪತಿಯ ಪ್ರಸಾದ ಅನುಗ್ರಹದೊಂದಿಗೆ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳ ಆಶೀರ್ವಾದದೊಂದಿಗೆ ಜೀರ್ಣಾಷ್ಟ ಬಂಧ ಕಾರ್ಯಕ್ರಮವನ್ನು ಶಾಸ್ತ್ರೋಕ್ತ ನಡೆಸಲು ತೀರ್ಮಾನಿಸಲಾಗಿದೆ. ಈ ಹಿನ್ನಲೆಯಲ್ಲಿ ಜ.8ಕ್ಕೆ ಶ್ರೀ ದೇವರ ಕಲಾಸಂಕೋಚ ನಡೆಸಿ ಬಾಲಾಲಯದಲ್ಲಿ ಪ್ರತಿಷ್ಠಾಪಿಸಿ ನಿತ್ಯ ಸೇವಾ ಕೈಂಕರ್ಯವನ್ನು ನೆರವೇರಿಸಲಾಗುತ್ತದೆ ಎಂದು ತಿಳಿಸಿದ ಅವರು, ಈ ಕಾರಣದಿಂದ ಜನವರಿ 7ರ ನಂತರ ಶ್ರೀದೇವರಲ್ಲಿ ಪ್ರಸಾದ ಕೇಳಿಕೆ, ಅಭಿಷೇಕ, ಅರ್ಚನೆ ಇರುವದಿಲ್ಲ. ಆದರೆ, ನಿತ್ಯ ಸೇವಾ ಪೂಜೆ ಗಣಹವನ ಮುಂತಾದ ಸೇವೆಗಳು ಯಥಾವತ್ತಾಗಿ ನಡೆಸಲು ಅವಕಾಶ ಇದೆ ಎಂದು ತಿಳಿಸಿದ್ದಾರೆ.
ಫೆ.26ಕ್ಕೆ ಜೀರ್ಣಾಷ್ಟ ಬಂಧ:
ಶ್ರೀ ದೇವರಿಗೆ ನವೀಕೃತ ಗರ್ಭಗುಡಿ ಸಮರ್ಪಣೆ ಮತ್ತು ಜೀರ್ಣಾಷ್ಟಬಂಧ ಕಾರ್ಯಕ್ರಮಗಳನ್ನು ನಡೆಸಲು ಯೋಜಿಸಲಾಗಿದೆ. ಸ್ವರ್ಣವಲ್ಲಿಯ ಮಠಾಧೀಶರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಈ ಕಾರ್ಯಕ್ರಮ ನೆರವೇರಲಿದ್ದು, ಅಲ್ಲಿ ತನಕವೂ ನಿತ್ಯ ಸೇವಾ ಪೂಜೆ ಗಣಹವನ ಮುಂತಾದ ಸೇವೆಗಳು ಯಥಾವತ್ತಾಗಿ ನಡೆಯಲಿದೆ. ಪ್ರಸಾದ ಕೇಳಿಕೆಯನ್ನು ಮಾತ್ರ ಅಷ್ಟಬಂಧ ಕಾರ್ಯಕ್ರಮ ಮುಗಿಯುವವರೆಗೆ ಕೇಳದಿರುವಂತೆ ಶಾಸ್ತ್ರಜ್ಞರು ತಿಳಿಸಿರುವುದರಿಂದ ಇದನ್ನು ನಡೆಸಲಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಸೇವಾ ಅವಕಾಶವಿದೆ:
ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮ ಸಕಲ ಭಕ್ತಾದಿಗಳ ಸಹಕಾರದೊಂದಿಗೆ ಯಶಸ್ವಿಗೊಳಿಸಲು ವಿನಂತಿಸಿದ ಜಿ.ಎಸ್.ಹೆಗಡೆ ಅವರು, ಶ್ರೀ ದೇವರ ಜೀರ್ಣಾಷ್ಟಬಂಧ ಮತ್ತು ಗರ್ಭಗುಡಿ ನವೀಕರಣ ಸೇವೆಯನ್ನು ತನು-ಮನ-ಧನದೊಂದಿಗೆ ಸೇವಾ ಕೈಂಕರ್ಯ ಮಾಡುವ ಅವಕಾಶವೂ ಇದೆ. ವಿವರಗಳಿಗೆ ಸತೀಶ ಎಲೆಸರTel:+919448995440 ಸಂಪರ್ಕ ಮಾಡಬಹುದು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.