ಸಿದ್ದಾಪುರ: ತಾಲೂಕಿನ ಹುಲಿಮನೆಯ ಪ್ರಸಕ್ತ ಸಿ.ಐ.ಡಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಅಧೀಕ್ಷಕರಾದ ರಾಘವೇಂದ್ರ ಹೆಗಡೆ ಹುಲಿಮನೆಯವರನ್ನು ಹುಲಿಮನೆ ಕುಟುಂಬದವರು ಜ.5ರಂದು ಮಧ್ಯಾಹ್ನ 3.30ಕ್ಕೆ ಪಟ್ಟಣದ ಶಂಕರಮಠದ ಸಭಾಭವನದಲ್ಲಿ ಸನ್ಮಾನಿಸಲಿದ್ದಾರೆ.
ರಾಘವೇಂದ್ರ ಹೆಗಡೆ ತಮ್ಮ ಕರ್ತವ್ಯ ನಿರ್ವಹಣೆಗಾಗಿ ರಾಷ್ಟ್ರಪತಿ ಶಾಘ್ಲನೀಯ ಸೇವಾಪದಕ ಪಡೆಯುವ ಮೂಲಕ ಪ್ರತಿಷ್ಠಿತ ಗೌರವಕ್ಕೆ ಪಾತ್ರರಾಗಿದ್ದು, 2012ರಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕದ ಗೌರವವನ್ನು ಇವರು ಪಡೆದಿದ್ದರು. ಇವರು ಕನ್ನಡ ರಂಗಭೂಮಿಯಲ್ಲಿ ದಂತಕಥೆಯಾಗಿರುವ, ತಮ್ಮ ಅಭಿನಯಕ್ಕಾಗಿ ದೇಶದ ಮೊದಲ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ ಅವರಿಂದ ಗೌರವಿಸಲ್ಪಟ್ಟ ಹುಲಿಮನೆ ಸೀತಾರಾಮ ಶಾಸ್ತ್ರಿಯವರ (ಅಣ್ಣನ ಮೊಮ್ಮಗ) ಮೊಮ್ಮಗ ಎನ್ನುವುದು ಮಹತ್ವದ ಸಂಗತಿ.
ಹುಲಿಮನೆಯ ಕೃಷ್ಣಮೂರ್ತಿ ಹೆಗಡೆ, ಲಲಿತಾ ಹೆಗಡೆ ದಂಪತಿಗಳ ಪುತ್ರರಾದ ರಾಘವೇಂದ್ರ ಹೆಗಡೆ ಬೆಂಗಳೂರು ವಿ.ವಿ. ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದು ಎರಡು ವರ್ಷಗಳ ವಕೀಲಿ ವೃತ್ತಿಯ ನಂತರ ಸಿ.ಐ.ಡಿ. ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪೊಲೀಸ್ ಇಲಾಖೆಗೆ ಸೇರಿ 22 ವರ್ಷಗಳ ಸೇವೆ ಸಲ್ಲಿಸುತ್ತ, 2001ರಲ್ಲಿ ಡಿಟೆಕ್ಟಿವ್ ಸಬ್ ಇನಸ್ಪೆಕ್ಟರ್ ಆಗಿ, ಸೈಬರ್ ಕ್ರೈಂ ಇಲಾಖೆಯ ಉಸ್ತುವಾರಿಯಾಗಿ ಈಗ ಸಿ.ಐ.ಡಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಅಧೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ನಿ ಸುಮಲತಾ, ಪುತ್ರ ಯಶಸ್ವಿ ಜೊತೆಗಿನ ಸಂತೃಪ್ತ ಕುಟುಂಬ ಅವರದ್ದಾಗಿದೆ.
ಸವಾಲಿನ ಪ್ರಕರಣಗಳಾದ ಬಹುಕೋಟಿ ವಂಚನೆಯ ಅಬ್ದುಲ್ ಕರೀಂ ತೆಲಗಿ ನಕಲಿ ಸ್ಟಾಂಪ್ ಪೇಪರ್ ಜಾಲದ ಪ್ರಾಥಮಿಕ ತನಿಖೆ, ಪಿ.ಎಸ್.ಐ. ನೇಮಕಾತಿ ಅಕ್ರಮ ಪ್ರಕರಣದ ಉಸ್ತುವಾರಿ,ಸೈಬರ್ ಅಪರಾಧಗಳ ಬಗೆಹರಿಸುವಿಕೆ ಮುಂತಾದ ಕ್ಲಿಷ್ಟಕರ ಪ್ರಕರಣಗಳನ್ನು ರಾಘವೇಂದ್ರ ಹೆಗಡೆ ನಿಭಾಯಿಸಿದ್ದಾರೆ.
ತಮ್ಮ ಕುಟುಂಬದ ರಾಘವೇಂದ್ರ ಹೆಗಡೆ ಸಾಧನೆಗೆ ಹುಲಿಮನೆ ಕುಟುಂಬದವರು ಗೌರವ ಸನ್ಮಾನ ಆಯೋಜಿಸಿದ್ದು ಎಲ್ಲರೂ ಪಾಲ್ಗೊಳ್ಳಬೇಕೆಂದು ಸಂಘಟಕರಲ್ಲೊಬ್ಬರಾದ ಗಣಪತಿ ಹೆಗಡೆ ಹುಲಿಮನೆ ಕೋರಿದ್ದಾರೆ.