ಹೊನ್ನಾವರ: ಸ್ತ್ರೀಯರ ಶಿಕ್ಷಣಕ್ಕೆ ಆದ್ಯತೆಯನ್ನು ಕೊಡಬೇಕು, ಅವರು ವಿದ್ಯಾವಂತರಾದರೆ ದೇಶವು ಪ್ರಗತಿ ಪಥದತ್ತ ಸಾಗುತ್ತದೆ ಎಂದು ಆಡಳಿತಾಧಿಕಾರಿ ಎಂ.ಎಸ್. ಹೆಗಡೆ ಗುಣವಂತೆ ಹೇಳಿದರು.
ಅವರು ಕವಲಕ್ಕಿಯ ಶ್ರೀ ಭಾರತೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿದ “ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆ” ಯಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಅಕ್ಷರ ಮಾತೆ, ಜ್ಞಾನದಾತೆ, ಭಾರತದ ಮೊದಲ ಶಿಕ್ಷಕಿ ಎಂಬ ಖ್ಯಾತಿಗೆ ಪಾತ್ರರಾದ ಸಾವಿತ್ರಿ ಫುಲೆಯವರು ಆದರ್ಶ ಪ್ರಾಯರಾಗಿದ್ದರು. ಸತಿ ಸಹಗಮನ, ಕೇಶಮುಂಡನ, ಬಾಲ್ಯವಿವಾಹ ಮೊದಲಾದ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಿದ ಧೀರ ಮಹಿಳೆ ಇವರಾಗಿದ್ದರು ಎಂದರು.
ಮುಖ್ಯ ಶಿಕ್ಷಕಿ ವೈಲೆಟ್ ಫರ್ನಾಂಡಿಸ್ ಮಾತನಾಡಿ ಸ್ತ್ರೀಯರ ಶಿಕ್ಷಣಕ್ಕಾಗಿ ಹೋರಾಟವನ್ನು ಮಾಡಿದ್ದ ಸಾವಿತ್ರಿಬಾಯಿ ಫುಲೆಯವರು ವಿಶ್ವದ ಗಮನವನ್ನು ಸೆಳೆದಿದ್ದರು. ಅಂದು ಭಾರತದಲ್ಲಿ ಆಡಳಿತ ನಡೆಸುತ್ತಿದ್ದ ಬ್ರಿಟಿಷ್ ಸರಕಾರವೇ ಇವರನ್ನು “ಇಂಡಿಯಾಸ್ ಫಸ್ಟ್ ಲೇಡಿ ಟೀಚರ್”ಎಂಬ ಬಿರುದನ್ನು ನೀಡಿ ಗೌರವಿಸಿತ್ತು ಎಂದರು.
.ಶಿಕ್ಷಕ ಹರೀಶ ಸಂಕೋಳ್ಳಿ ಸ್ವಾಗತಿಸಿದರು. ಶಿಕ್ಷಕಿ ಸಂಗೀತ ಹೆಗಡೆ ವಂದಿಸಿದರು.ಕೀರ್ತಿ ನಾಯ್ಕ ನಿರೂಪಿಸಿದರು. ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.