ಹೊನ್ನಾವರ : ಮೆಟ್ರಿಕ್ ಮೇಳ ವಿದ್ಯಾರ್ಥಿಗಳ ವ್ಯವಹಾರಿಕ ಜ್ಞಾನಕ್ಕೆ ಪೂರಕವಾದದ್ದು. ಮಕ್ಕಳಲ್ಲಿ ಕೊಡು-ಕೊಳ್ಳುವ ವ್ಯವಹಾರದ ಜೊತೆಗೆ ಹೊಸ ಚಿಂತನೆಗೆ ದಾರಿ ದೀಪವಾಗಲಿದೆ ಎಂದು ಹಡಿನಬಾಳ ಗ್ರಾಮ ಪಂಚಾಯತ ಅಧ್ಯಕ್ಷ ವೆಂಕಟೇಶ ಗೌಡ ಹೇಳಿದರು.
ಇತ್ತೀಚೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾವೂರಿನಲ್ಲಿ ನಡೆದ ಮೆಟ್ರಿಕ್ ಮೇಳ ಉದ್ಘಾಟಿಸಿ ಮಾತನಾಡಿ, ಓದು-ಬರಹದ ಜೊತೆಯಲ್ಲಿ ಸುತ್ತ-ಮುತ್ತಲಿನ ಪರಿಸರದ ಜ್ಞಾನವು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ನೆರವಾಗುತ್ತದೆ.ಇಂಥಹ ಮೇಳಗಳು ಮಹತ್ವಪೂರ್ಣವಾದದ್ದು ಎಂದರು.
ಮುಖ್ಯ ಅತಿಥಿ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ನಾಯ್ಕ ಇಲಾಖೆಯ ಕಾರ್ಯಕ್ರಮಗಳಲ್ಲಿ ಒಂದಾದ ಮೆಟ್ರಿಕ್ ಮೇಳಗಳ ಉದ್ದೇಶಗಳ ಕುರಿತು ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಪ್ರತಿನಿತ್ಯದ ವ್ಯವಹಾರಿಕ ಜ್ಞಾನವು ಅವರ ಬದುಕನ್ನು ಕಟ್ಟಿಕೊಳ್ಳಲು ನೆರವಾಗುವುದು. ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ ಪ್ರತಿ ಮಗುವಿನಲ್ಲಿರುವ ಕೌಶಲ್ಯವನ್ನು ವೃದ್ಧಿಪಡಿಸಿ ಸೂಕ್ತ ಮಾರ್ಗದರ್ಶನ ನೀಡಿದಾಗಲೇ ಅವನ ವೈಯಕ್ತಿಕ ಬದುಕು ಗಟ್ಟಿಗೊಳ್ಳಲು ಸಾಧ್ಯ ಎಂದರು.
ಎಸ್.ಡಿ.ಎಮ್.ಸಿ. ಅಧ್ಯಕ್ಷ ಗಣಪಯ್ಯ ಗೌಡ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ವಿ.ಜಿ. ನಾಯ್ಕ, ಸಮೂಹ ಸಂಪನ್ಮೂಲ ವ್ಯಕ್ತಿ ಸಚ್ಚಿದಾನಂದ ಭಟ್ಟ ಸಂದರ್ಭೋಚಿತವಾಗಿ ಮಾತನಾಡಿದರು. ಪ್ರಾರಂಭದಲ್ಲಿ ಮುಖ್ಯಾಧ್ಯಾಪಕ ಶೇಖರ ನಾಯ್ಕ ಸ್ವಾಗತಿಸಿದರೆ, ಶಿಕ್ಷಕ ರಾಮು ಭಾಗವತ ವಂದಿಸಿದರು.