Slide
Slide
Slide
previous arrow
next arrow

ಕೋವಿಡ್ 19 ನಿರ್ವಹಣೆಗೆ ಅಗತ್ಯ ಸಿದ್ದತೆ ಕೈಗೊಳ್ಳಿ : ಸಚಿವ ವೈದ್ಯ

300x250 AD

ಕಾರವಾರ: ಜಿಲ್ಲೆಯಲ್ಲಿ ಕೋವಿಡ್ 19 ಎದುರಿಸುವ ಕುರಿತಂತೆ ಆರೋಗ್ಯ ಇಲಾಖೆಯಿಂದ ಎಲ್ಲಾ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಸೂಚನೆ ನೀಡಿದರು.

ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಕೋವಿಡ್ ನಿರ್ವಹಣೆ ಕುರಿತ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೋವಿಡ್ 19 ನ್ನು ಯಶಸ್ವಿಯಾಗಿ ಎದುರಿಸುವ ಕುರಿತಂತೆ , ಪ್ರಸ್ತುತ ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ವೈದ್ಯರು, ಪ್ರಯೋಗ ಶಾಲಾ ತಜ್ಞರು, ಇತರೇ ಅಗತ್ಯ ಸಿಬ್ಬಂದಿಗಳು ಮತ್ತು ವಾಹನಗಳು ಹಾಗೂ ಆಂಬುಲೈನ್ಸ್ಗಳ ಕೊರತೆಯನ್ನು ತುಂಬುವ ಕುರಿತಂತೆ ಈಗಿನಿಂದಲೇ ಅಗತ್ಯ ಪರ್ಯಾಯ ಸಿದ್ದತೆಗಳನ್ನು ಕೈಗೊಳ್ಳುವಂತೆ ತಿಳಿಸಿದ ಸಚಿವರು, ಆರೋಗ್ಯ ಸಂಬಂಧಿತ ಎಲ್ಲಾ ಉಪಕರಣಗಳನ್ನು ಸುಸಜ್ಜಿತವಾಗಿಟ್ಟುಕೊಂಡು, ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಸಿದ್ದ ಮಾಡಿಟ್ಟುಕೊಳ್ಳುವ ಮೂಲಕ ಜಿಲ್ಲೆಯ ಯಾವುದೇ ಸಾರ್ವಜನಿಕರಿಗೆ ಆರೋಗ್ಯ ಸೇವೆಗಳಲ್ಲಿ ವ್ಯತ್ಯಯವಾಗದಂತೆ ಎಚ್ಚರವಹಿಸುವಂತೆ ಸೂಚನೆ ನೀಡಿದರು.

ಜಿಲ್ಲೆಯ ಎಲ್ಲಾ ಆರೋಗ್ಯಾಧಿಕಾರಿಗಳು ಕೇಂದ್ರಸ್ಥಾನಗಳಲ್ಲಿ ಲಭ್ಯವಿದ್ದು ತಕ್ಷಣದಲ್ಲಿ ಸಂಪರ್ಕಕ್ಕೆ ಸಿಗುವಂತಿರಬೇಕು, ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ದೂರವಾಣಿಗಳು ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿರಬೇಕು, ತಮ್ಮ ವ್ಯಾಪ್ತಿಯ ಸಾರ್ವಜನಿಕರಿಗೆ ಈ ದೂರವಾಣಿ ಸಂಖ್ಯೆಗಳ ಬಗ್ಗೆ ಮಾಹಿತಿ ನೀಡಿ, ಕರೆ ಬಂದಲ್ಲಿ ತಕ್ಷಣ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು, ಕೋವಿಡ್ ನಿರ್ವಹಣೆಯಲ್ಲಿ ಲೋಪವಾದರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಿ, ಅವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ಕೋವಿಡ್ ನಿರ್ವಹಣೆಯಲ್ಲಿ ಆರೋಗ್ಯ ಇಲಾಖೆಗೆ ಇತರೇ ಇಲಾಖೆಗಳು ಎಲ್ಲಾ ರೀತಿಯ ಅಗತ್ಯ ಸಹಕಾರ ಮತ್ತು ತುರ್ತು ಸಂದರ್ಭದಲ್ಲಿ ತಮ್ಮ ಇಲಾಖೆಯ ವಾಹನಗಳನ್ನು ಒದಗಿಸಬೇಕು, ಜಿಲ್ಲೆಯ ಎಲ್ಲಾ ಇಲಾಖೆಗಳು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸುವ ಮೂಲಕ ಜಿಲ್ಲೆಯ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಬೇಕು. ಆರೋಗ್ಯ ಇಲಾಖೆಯ ಅಧಿಕಾರಿಗಳು ಸಂಬಂಧಪಟ್ಟ ತಾಲೂಕಿನ ತಹಶೀಲ್ದಾರ್ ಮತ್ತು ಉಪ ವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕೋವಿಡ್ ನಿರ್ವಹಣೆ ಕುರಿತಂತೆ ಕಾಲ ಕಾಲಕ್ಕೆ ಸಭೆಗಳನ್ನು ನಡೆಸಿ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಜಿಲ್ಲೆಯ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಔಷಧಿಗಳನ್ನು ಹೊರಗಿನಿಂದ ಪಡೆಯುವಂತೆ ಕೆಲ ವೈದ್ಯರು ಚೀಟಿಗಳನ್ನು ಕೊಡುತ್ತಿರುವ ಕುರಿತಂತೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಚಿವರು, ಯಾವುದೇ ಕಾರಣಕ್ಕೂ ಈ ರೀತಿಯಾಗಿ ರೋಗಿಗಳಿಗೆ ಚೀಟಿ ನೀಡದಂತೆ ತಿಳಿಸಿದ ಅವರು, ಆರೋಗ್ಯ ರಕ್ಷಾ ಸಮಿತಿಗಳ ಮೂಲಕ ಅಗತ್ಯವಿರುವ ಔಷಧಗಳನ್ನು ಖರೀದಿಸಿ ಉಚಿತವಾಗಿಯೇ ವಿತರಿಸುವಂತೆ ಸೂಚನೆ ನೀಡಿದರು.

300x250 AD

ಜಿಲ್ಲೆಯಲ್ಲಿ ಪ್ರತಿ ದಿನದ ಐ.ಎಲ್.ಐ ಮತ್ತು ಸಾರಿ ಪ್ರಕರಣಗಳನ್ನು ಪರೀಕ್ಷೆಗೆ ಒಳಪಡಿಸುತ್ತಿದ್ದು, ಇದುವರೆಗೆ 71298 ಪರೀಕ್ಷೆಗಳನ್ನು ನಡೆಸಿದ್ದು, 7 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಪ್ರತಿದಿನ 150 ಐ.ಎಲ್.ಐ ಮತ್ತು ಸಾರಿ ಪ್ರಕರಣಗಳನ್ನು ಪರೀಕ್ಷೆಗೆ ಒಳಪಡಿಸುವ ಗುರಿ ಇದ್ದು ಜಿಲ್ಲೆಯಲ್ಲಿ 200 ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಮುಂಜಾಗ್ರತೆಯಾಗಿ 1678 ಬೆಡ್ ವ್ಯವಸ್ಥೆ ಮಾಡಿದ್ದು, ಅದರಲ್ಲಿ 186 ಐಸೋಲೇಷನ್ ಬೆಡ್, 1170 ಆಮ್ಲಜನಕ ವ್ಯವಸ್ಥೆ ಇರುವ ಐಸೋಲೇಷನ್ ಬೆಡ್, 201 ಐ.ಸಿ.ಯು ಬೆಡ್, 121 ಐ.ಸಿ.ಯು ವಿತ್ ವೆಂಟಿಲೇಟರ್ ಬೆಡ್ ಇದೆ. ಪಿಪಿಇ ಕಿಟ್ ಮತ್ತು ಎನ್ 95 ಮಾಸ್ಕ್, ಟ್ರಿಪಲ್ ಲೇಯರ್ ಮಾಸ್ಕ್ ಹಾಗೂ ಜ್ವರ ಶೀತದ ಮಾತ್ರೆಗಳ ಸಾಕಷ್ಟು ದಾಸ್ತಾನು ಇದೆ. ವೆಂಟಿಲೇಟರ್, ಆಕ್ಸಿಮೀಟರ್, ಅಕ್ಸಿಜನ್ ಕಾನ್ಸನ್ ಟ್ರೇಟರ್, ಆಕ್ಸಿಜನ ಸಿಲೆಂಡರ್, ಪಿ.ಎಸ್.ಎ ಪ್ಲಾಂಟ್, ಲಿಕ್ವಿಡ್ ಆಕ್ಸಿಜಿನ್ ಸ್ಟೋರೇಜ್ ಟ್ಯಾಂಕ್ ವ್ಯವಸ್ಥೆಯನ್ನು ಪರಿಶೀಲಿಸಲಾಗಿದೆ ಎಂದು ಡಿ.ಹೆಚ್.ಓ ಡಾ. ನೀರಜ್ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಎಸ್ಪಿ ವಿಷ್ಣುವರ್ಧನ್. ಎನ್, ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್, ಉಪ ವಿಭಾಗಾಧಿಕಾರಿ ಕನಿಷ್ಕ ಹಾಗೂ ಆರೋಗ್ಯ ಇಲಾಖೆ ಮತ್ತು ಜಿಲ್ಲೆಯ ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top