ಕಾರವಾರ: ಜಿಲ್ಲೆಯ ಕಾರವಾರ ತಾಲ್ಲೂಕಿನ ದೇವಳಮಕ್ಕಿ, ಕೆರವಡಿ, ಕಿನ್ನರ, ಕಡವಾಡ ಗ್ರಾಮ ಪಂಚಾಯತಿಗಳಿಗೆ ಶುಕ್ರವಾರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕಾಂದೂ ಭೇಟಿ ನೀಡಿ ಮಹಾತ್ಮಗಾಂಧಿ ನರೇಗಾ, ಎಸ್ಬಿಎಂ ಸೇರಿದಂತೆ ವಿವಿಧ ಯೋಜನೆಗಳಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ದೇವಳಮಕ್ಕಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬರ್ಗಲ್ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿನೀಡಿದ ಸಿಇಒ, ಶಾಲಾ ಆವರಣದಲ್ಲಿ ನರೇಗಾದಡಿ ನಿರ್ಮಿಸಿರುವ ಶೌಚಾಲಯ, ಕಾಂಪೌಂಡ್ ಕಾಮಗಾರಿ ಪರಿಶೀಲಿಸಿದರು. ಜೊತೆಗೆ ಶಾಲಾ ಅಡುಗೆ ಕೋಣೆ ವೀಕ್ಷಿಸಿ ಮಕ್ಕಳಿಗೆ ನೀಡುವ ಬಿಸಿಯೂಟದ ತಯಾರಿಕೆ, ಸ್ವಚ್ಛತೆ, ಆಹಾರ ಸಾಮಗ್ರಿಗಳ ಸಂಗ್ರಹಣೆ ಬಗ್ಗೆ ಮಾಹಿತಿ ಪಡೆದರು. ಹಾಗೇ ಶಾಲಾ ಕೊಠಡಿಗೆ ತೆರಳಿ ಮಕ್ಕಳ ಕಲಿಕೆ ಕುರಿತು ಸಮಾಲೋಚನೆ ನಡೆಸಿದರು. ನಂತರ ಎಸ್ಬಿಎಂ ಯೋಜನೆಯಡಿ ಪ್ರಗತಿಯಲ್ಲಿರುವ ಕಸ ವಿಲೇವಾರಿ ಘಟಕ ನಿರ್ಮಾಣ ಕಾಮಗಾರಿ ವೀಕ್ಷಿಸಿದರು. ಹಾಗೇ ಗ್ರಾಮ ಪಂಚಾಯತಿ ಪಕ್ಕದಲ್ಲಿರುವ ಡಿಜಿಟಲ್ ಗ್ರಂಥಾಲಯಕ್ಕೆ ತೆರಳಿ ವೀಕ್ಷಿಸಿ ಸುಸಜ್ಜಿತ ಗ್ರಂಥಾಲಯ ನಿರ್ಮಿಸಿ ಓದುಗರಿಗೆ ಪೂರಕವಾಗುಂತೆ ಅಗತ್ಯ ಪಠ್ಯ, ಸ್ಪರ್ಧಾತ್ಮಕ ಪುಸ್ತಕ, ಕಂಪ್ಯೂಟರ್, ಇಂಟರ್ನೆಟ್, ಟೇಬಲ್, ಕುರ್ಚಿ ಅಳವಡಿಸಿದ್ದಕ್ಕೆ ತಾಪಂ ಇಒ ಅವರಿಗೆ ಅಭಿನಂದಿಸಿ ಪ್ರಶಂಸೆ ವ್ಯಕ್ತಪಡಿಸಿದರು. ಗ್ರಾಪಂ ಪಕ್ಕದ ಸರಕಾರಿ ಶಾಲಾ ಆವರಣದಲ್ಲಿ ನರೇಗಾದಡಿ ನಿರ್ಮಿತ ಕಾಂಪೌಂಡ್, ಶೌಚಾಲಯ, ಅಡುಗೆ ಕೋಣೆ ಕಾಮಗಾರಿ ವೀಕ್ಷಿಸಿ ಹಲವು ಸಲಹೆ ಸೂಚನೆ ನೀಡಿದರು.
ತದನಂತರದಲ್ಲಿ ಕೆರವಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾದಡಿ ಕೈಗೊಂಡಿರುವ ಅಮೃತ ಸರೋವರ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದರು. ಹಾಗೇ ಕೆರವಡಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಘಟಕಕ್ಕೆ ಭೇಟಿನೀಡಿ ಪರಿಶೀಲಿಸಿ ಅಗತ್ಯ ಮಾಹಿತಿ ಪಡೆದರು. ನಂತರ ಕಿನ್ನರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾದಡಿ ಅಭಿವೃದ್ಧಿಪಡಿಸಲಾದ ತಡೆಗೋಡೆ ನಿರ್ಮಾಣ, ಮಳೆ ನೀರು ಕಾಲುವೆ ಹಾಗೂ ಪ್ರಗತಿಯಲ್ಲಿರುವ ಕಾಲುವೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಹಾಗೇ ಕಡವಾಡ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ನರೇಗಾ ಕೂಲಿಕಾರರ ಮಕ್ಕಳ ಆರೈಕೆಗಾಗಿ ಅಭಿವೃದ್ಧಿಪಡಿಸಲಾದ ಕೂಸಿನ ಮನೆ(ಶಿಶು ಪಾಲನಾ ಕೇಂದ್ರ)ಕ್ಕೆ ಭೇಟಿನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಕಾರವಾರ ತಾಲ್ಲೂಕು ಪಂಚಾಯತ್ನ ಕಾರ್ಯನಿರ್ವಾಹಕ ಅಧಿಕಾರಿ ಡಾ. ಆನಂದಕುಮಾರ ಬಾಳಪ್ಪನವರ, ನರೇಗಾ ಸಹಾಯಕ ನಿರ್ದೇಶಕ ಸಂದೀಪ್ ಕೋಠಾರಕರ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಭಾವತಿ ಬಂಟ, ಪ್ರವಿಣಾ ಗಾವಸ್, ರಘುನಂದನ್ ಮಡಿವಾಳ, ಮಧುರಾ ನಾಯ್ಕ, ಡಿಐಇಸಿ ಫಕ್ಕೀರಪ್ಪ ತುಮ್ಮಣ್ಣನವರ, ಟಿಸಿ ಸೂರಜ್ ಗುನಗಿ, ತಾಂತ್ರಿಕ ಸಹಾಯಕ ಪ್ರಕಾಶ ನಾಯ್ಕ, ದರ್ಶನ, ಗ್ರಾಪಂ ಜನಪ್ರತಿನಿಧಿಗಳು, ಕಾರ್ಯದರ್ಶಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.