ಕಾರವಾರ: ಮಂಗಳೂರಿನಿಂದ ಮಡಗಾಂವ್ ಗೆ ಆರಂಭಗೊಂಡ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಶನಿವಾರ ಮಧ್ಯಾಹ್ನ 3.30 ಕ್ಕೆ ಕಾರವಾರ ರೈಲ್ವೆ ನಿಲ್ದಾಣ ತಲುಪಿದಾಗ ರೈಲಿಗೆ ಪುಷ್ಪಾರ್ಚನೆ ಮತ್ತು ಡೋಲು ವಾದನದ ಮೂಲಕ ಸ್ವಾಗತಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ ಸತೀಶ್ ಸೈಲ್ ಮಾತನಾಡಿ, ಹೊಸ ವರ್ಷ ಪ್ರಾರಂಭವಾಗುತ್ತಿರುವ ಸಂದರ್ಭದಲ್ಲಿ, ಕೇಂದ್ರ ಸರ್ಕಾರ ಜಿಲ್ಲೆಯ ಜನತೆಗೆ ಒಳ್ಳೆಯ ಸುದ್ದಿ ನೀಡಿದೆ. ಪ್ರಧಾನ ಮಂತ್ರಿಗಳು ಜಿಲ್ಲೆಗೆ ವಂದೇ ಭಾರತ್ ರೈಲು ಕಲ್ಪಿಸಿದ್ದಾರೆ. ಇಂದು ಜಿಲ್ಲೆಯ ಬಹು ಜನರ ನಿರೀಕ್ಷೆ ನಿಜವಾಗಿದೆ . ಬೆಂಗಳೂರುನಿಂದ ಮುರುಡೇಶ್ವರದವರೆಗೆ ಸಂಚರಿಸುವ ರೈಲನ್ನು ಕಾರವಾರದವರೆಗೆ ವಿಸ್ತರಿಸುವ ಕಾರ್ಯ ಶೀಘ್ರದಲ್ಲಿ ಆಗಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕುಮಾರ ಕಾಂದೂ, ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್, ಶಿರವಾಡ ಗ್ರಾ.ಪಂ. ಅಧ್ಯಕ್ಷೆ ಅಶ್ವಿನಿ, ಮಾಜಿ ಶಾಸಕಿ ರೂಪಾಲಿ ನಾಯ್ಕ್ ಭಾಗವಹಿಸಿದ್ದರು. ಕೊಂಕಣ ರೈಲ್ವೆಯ ಪ್ರಾದೇಶಿಕ ಮೆನೇಜರ್ ಬಿ.ಬಿ. ನಿಕ್ಕಂ ಮಾರ್ಗದರ್ಶನದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಕಾರವಾರದ ಹಿರಿಯ ಪ್ರಾದೇಶಿಕ ಇಂಜಿನಿಯರ್ ಬಿ.ಎಸ್. ನಾಡಗೆ, ಕಾರವಾರ ರೈಲ್ವೆ ನಿಲ್ದಾಣದ ಸ್ಟೇಶನ್ ಇನ್ ಛಾರ್ಜ್ ಉದಯ ಸಾರಂಗ್, ಸೀನಿಯರ್ ಪ್ರಾದೇಶಿಕ ಇಂಜಿನಿಯರ್ ( ಸಿಗ್ನಲ್ ಮತ್ತು ಟೆಲಿಕಾಂ) ರಮೇಶ್ ಬಾಬು, ಸೀನಿಯರ್ ಸೆಕ್ಷನ್ ಇಂಜಿನಿಯರ್ (ಸಿಗ್ನಲ್ ಮತ್ತು ಟೆಲಿಕಾಂ) ಮುರುಗೇಶನ್, ಅಸಿಸ್ಟೆಂಟ್ ಎಲೆಕ್ಟ್ರಿಕಲ್ ಇಂಜಿನಿಯರ್ ರಜತ್ ಸಿನ್ಹಾ, ಕಾರವಾರ ರೈಲ್ವೆ ನಿಲ್ದಾಣದ ಸೀನಿಯರ್ ಕಮರ್ಷಿಯಲ್ ಸೂಪರ್ವೈಸರ್ ಉಪೇಂದ್ರ ಮತ್ತಿತರ ರೈಲ್ವೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಶನಿವಾರದಂದು ಈ ರೈಲಿನಲ್ಲಿ ಕಾರವಾರದಿಂದ ಮಡಂಗಾವ್ಗೆ ತೆರಳಲು ಮತ್ತು ವಾಪಸ್ ಕಾರವಾರಕ್ಕೆ ಆಗಮಿಸಲು 300 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉಚಿತ ಪಾಸ್ ವಿತರಿಸಲಾಗಿತ್ತು. ಗುರುವಾರ ಹೊರತುಪಡಿಸಿ ವಾರದ 6 ದಿನ ಈ ರೈಲು ಸಂಚರಿಸಲಿದ್ದು, ಗಂಟೆಗೆ 120 ಕಿಮೀಗೂ ಅಧಿಕ ವೇಗದಲ್ಲಿ ಚಲಿಸಲಿದ್ದು, 8 ಕೋಚ್ ಗಳನ್ನು ಹೊಂದಿದೆ. ಸಂಪೂರ್ಣ ಹವಾನಿಯಂತ್ರಿತವಾಗಿದ್ದು, ಏರ್ ಲೈನ್ ಮಾದರಿಯ ಸೀಟುಗಳ ಜೊತೆಗೆ ಎಕ್ಸಿಕ್ಯೂಟಿವ್ ಚೇರ್ ಗಳು ಮತ್ತು ಸಸ್ಯಾಹಾರಿ ಮತ್ತು ಮಾಂಸಾಹಾರಿ ಊಟದ ವ್ಯವಸ್ಥೆ ಕೂಡಾ ಇದೆ. ಆನ್ಬೋರ್ಡ್ ವೈಫೈ, ರೀಡಿಂಗ್ ಲೈಟ್ ವ್ಯವಸ್ಥೆ, ಸ್ವಯಂ ಚಾಲಿತ ಬಾಗಿಲುಗಳು, ಸ್ಮೋಕ್ ಅಲರ್ಟ್ , ಸಿಸಿಟಿವಿಗಳು ಮತ್ತಿತರ ಆಧುನಿಕ ಸೌಲಭ್ಯಗಳು ಇವೆ. ಕಾರವಾರ ಮತ್ತು ಉಡುಪಿ ಹೊರತುಪಡಿಸಿ ಬೇರೆಲ್ಲೂ ನಿಲುಗಡೆ ಇರುವುದಿಲ್ಲ.