ಸಿದ್ದಾಪುರ: ರಾಜ್ಯದ ಕಾಂಗ್ರೆಸ್ ಸರ್ಕಾರ ಮಹಿಳೆಯರನ್ನು ಶಕ್ತರನ್ನಾಗಿಸಲು ಜನಪರ ಯೋಜನೆ ಅನುಷ್ಠಾನಗೊಳಿಸಿದ್ದು, ಸಿದ್ದಾಪುರ ತಾಲೂಕಿನಲ್ಲಿ ಗಾರ್ಮೆಂಟ್ಸ್ ತೆರೆಯಲು ಸರ್ಕಾರದ ಮಟ್ಟದಲ್ಲಿ ಒತ್ತಡ ಹಾಕಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು.
ಮನುವಿಕಾಸ ಸಂಸ್ಥೆ ಶಿರಸಿ ಮತ್ತು ಇಡಲಗೀವ್ ಫೌಂಡೇಶನ್ ವತಿಯಿಂದ ಸಿದ್ದಾಪುರದ ಶಂಕರಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ಮಹಿಳಾ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿ, ಆರ್ಥಿಕವಾಗಿ ಸಬಲವಾಗಿದ್ದರೆ ಮಾತ್ರ ಸಂಸಾರವನ್ನು ಸುಸೂತ್ರವಾಗಿ ನಡೆಸಲು ಸಾಧ್ಯವಾಗುತ್ತಿದೆ. ಸರ್ಕಾರವು ಸಹ ಸ್ತ್ರೀಶಕ್ತಿ ಹಾಗೂ ಸ್ವಸಹಾಯ ಸಂಘಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಿ ಪ್ರೋತ್ಸಾಹ ನೀಡುತ್ತಿದೆ. ಜತೆಗೆ ಮನುವಿಕಾಸ ಸಂಸ್ಥೆ ಸಹ ಮಹಿಳೆಯರ ಸ್ವಾವಲಂಭನೆಗೆ ದಾರಿ ಮಾಡಿಕೊಡುತ್ತಿರುವುದು ಸ್ತ್ರೀಯರಲ್ಲಿ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚಿಸಿದೆ. ತಾಲೂಕಿನಲ್ಲಿ ಕೈಗಾರಿಕಾ ವಸಾಹತು ಪ್ರದೇಶ ನಿರ್ಮಿಸಿ ಉದ್ಯೋಗಾವಕಾಶಗಳನ್ನು ಕಲ್ಪಿಸಲಾಗುವುದು. ಸೂಕ್ತ ಸ್ಥಳದಲ್ಲಿ ಗಾರ್ಮೆಂಟ್ಸ್ ಸ್ಥಾಪಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದ ಅವರು, ಸಿದ್ದಾಪುರ ತಾಲೂಕಿನಲ್ಲಿ ಮಳೆ ಕಡಿಮೆಯಾಗಿದ್ದರಿಂದ ಬರದ ಭವಣೆ ಎದುರಾಗುವ ಹಿನ್ನೆಲೆಯಲ್ಲಿ ಎಲ್ಲಾ ತಾಯಂದಿರು ನೀರನ್ನು ಮಿತವಾಗಿ ಬಳಸಿ ಎಂದು ಕರೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರ ಮಾತನಾಡಿ, ಮಹಿಳಾ ಸಂಘಟನೆಗಳು ಗಟ್ಟಿಯಾಗಬೇಕು. ಸಂಘ-ಸಂಸ್ಥೆಗಳ ಮೂಲಕ ಸ್ತ್ರೀಯರ ಸ್ವಾವಲಂಬನೆ ಹೆಚ್ಚಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಅತಿ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ. ಬದುಕುವ ದಾರಿ ಹೇಳಿಕೊಡುವವರನ್ನು ಯಾರು ಮರೆಯಬಾರದು. ಮಹಿಳೆಯರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಎಂದು ಕರೆ ನೀಡಿದರು.
ಪ್ರಮುಖರಾದ ಕೆ.ಜಿ.ನಾಗರಾಜ, ಶಶಿಭೂಷಣ ಹೆಗಡೆ, ರವಿ ಹೆಗಡೆ ಹೂವಿನಮನೆ, ವಿ.ಎನ್.ನಾಯ್ಕ ಬೇಡ್ಕಣಿ ಮಾತನಾಡಿದರು. ಈ ವೇಳೆ ವಸಂತ ನಾಯ್ಕ ಮನಮನೆ, ತಾಲೂಕಾ ಆರೋಗ್ಯಾಧಿಕಾರಿ ಲಕ್ಷ್ಮೀಕಾಂತ ನಾಯ್ಕ, ಪ್ರಗತಿಮಿತ್ರ ಸೌಹಾರ್ದ ಸಿಇಓ ವಿನಯ್ ನಾಯ್ಕ, ಧನ್ವಂತರಿ ಆಯುರ್ವೇದ ಕಾಲೇಜಿನ ಡಾ. ರೂಪಾ ಭಟ್, ಉಷಾ ಪ್ರಶಾಂತ ನಾಯ್ಕ, ಉಮೇಶ ನಾಯ್ಕ ಕಡಕೇರಿ, ಪ್ರಶಾಂತ ನಾಯ್ಕ ಹೊಸೂರ ಉಪಸ್ಥಿತರಿದ್ದರು. ಮನುವಿಕಾಸ ಸಂಸ್ಥೆಯ ನಿರ್ದೇಶಕ ಗಣಪತಿ ಭಟ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸಾಹಿತಿ ಹಾಗೂ ಕವಿಯತ್ರಿ ಉಷಾ ಪ್ರಶಾಂತ ನಾಯ್ಕ ಮನುವಿಕಾಸ ಸಂಸ್ಥೆ ಕುರಿತು ಸ್ವರಚಿತ ಕವನ ವಾಚಿಸಿದರು.