ಶಿರಸಿ: ‘ಕೃತಕ ಬುದ್ದಿಮತ್ತೆ’ ಅಪಾಯಕಾರಿಯಾದುದು ಎಂದು ಪರಿಸರ ವಿಜ್ಞಾನಿ ಡಾ.ಕೇಶವ ಕೊರ್ಸೆ ಹೇಳಿದ್ದಾರೆ.
ಅವರು ಸರಕಾರಿ ನಿವೃತ್ತ ನೌಕರರ ಸಂಘದ ಭವನದಲ್ಲಿ ನಡೆದ ‘ಪೆನ್ಶನರ್ಸ ಡೇ’ ಉದ್ಘಾಟಿಸಿ ಮಾತನಾಡುತ್ತಿದ್ದರು. ಕೃತಕ ಬುದ್ಧಿಮತ್ತೆಯನ್ನು ಯಾವ ಕ್ಷೇತ್ರದಲ್ಲಿ ಉಪಯೋಗಿಸಬೇಕು, ಯಾವ ಪ್ರಮಾಣದಲ್ಲಿ ಎಂಬ ಬಗ್ಗೆ ನಿಖರತೆ ಇಲ್ಲ. ಅಪಾಯಕಾರಿ ಕ್ಷೇತ್ರದಲ್ಲಿ ಇದನ್ನು ಉಪಯೋಗಿಸಿದಲ್ಲಿ ಮನುಕುಲಕ್ಕೆ ಸರ್ವ ಸಂಕಷ್ಟ ಕಟ್ಟಿಟ್ಟ ಬುತ್ತಿ ಎಂದು ಹೇಳಿದರು. ಇಂದು ಯುವ ಜನಾಂಗ ವಿಜ್ಞಾನದ ಮತ್ತಿನಲ್ಲಿದೆ. ನಮ್ಮ ಸಂಸ್ಕೃತಿ, ಪರಂಪರೆಗಳನ್ನು ಮರೆತಿದೆ. ಇದು ಮುಂದಿನ ಜನಾಂಗಕ್ಕೆ ಮಾರಕವಾಗುವ ಸಾಧ್ಯತೆಗಳಿವೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷ ಎಮ್.ಎನ್.ಹೆಗಡೆ ಅಗಲಿದ ನಿಕಟಪೂರ್ವ ಅಧ್ಯಕ್ಷ ದಿ.ಎನ್.ವಿ.ಜಿ. ಭಟ್ಟರ ಸಂಘಟನಾ ಸೇವೆಯನ್ನು ಕೊಂಡಾಡಿದರು ಹಾಗೂ ಅವರ ಆದರ್ಶ ಗಳನ್ನು ಪಾಲಿಸಿ ಕಾರ್ಯನಿರ್ವಹಿಸುವದಾಗಿ ಎಂಬ ಭರವಸೆಯನ್ನು ನೀಡಿದರು.
2022-23 ನೇ ಸಾಲಿನ ಸರ್ವ ಸಾಧಾರಣ ಸಭೆಯಲ್ಲಿ ಉಪಾಧ್ಯಕ್ಷ ಡಿ.ಬಂಗಾರಪ್ಪ, ಕೋಶಾಧ್ಯಕ್ಷ ನರಸಿಂಹಮೂರ್ತಿ, ಪ್ರಧಾನ ಕಾರ್ಯದರ್ಶಿ ಎಸ್.ಪಿ.ಹೆಗಡೆ ಕಂಚಿಮನೆ, ಸಾಂಸ್ಕೃತಿಕ ಕಾರ್ಯದರ್ಶಿ ಡಿ.ಎಸ್.ಹೆಗಡೆ ಮುಂತಾದವರು ಉಪಸ್ಥಿತರಿದ್ದರು. ಎಸ್.ಪಿ.ಹೆಗಡೆ ಸ್ವಾಗತಿಸಿದರು, ಡಿ.ಎಸ್.ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು ಹಾಗೂ ಕ್ರೀಡಾ ಕಾರ್ಯದರ್ಶಿ ಎಚ್.ಆರ್.ತಿಮ್ಮಾಪುರ ವಂದಿಸಿದರು.