ಹಳಿಯಾಳ: ಕೊಲ್ಕತ್ತಾದ ದಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಇಂಡಿಯಾ(ಐಇಐ ) ಆಯೋಜಿಸಿದ್ದ ತಾಂತ್ರಿಕ ಶಿಕ್ಷಣ ಶ್ರೇಷ್ಠತಾ ಪುರಸ್ಕಾರ ಸ್ಪರ್ಧೆಯಲ್ಲಿ ಪಟ್ಟಣದ ಕೆಎಲ್ಎಸ್ ವಿಡಿಐಟಿ ಮಹಾವಿದ್ಯಾಲಯಕ್ಕೆ ವಿಶೇಷ ಪ್ರಮಾಣ ಪತ್ರ ನೀಡಿ ಪುರಸ್ಕರಿಸಿದೆ.
ರಾಷ್ಟ್ರಮಟ್ಟದ ಈ ಸ್ಪರ್ಧೆಯಲ್ಲಿ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತ ಬಂದಿರುವ ವಿಡಿಐಟಿಯ ಸಾಧನೆಯನ್ನು ಗುರುತಿಸಿ ಈ ಪುರಸ್ಕಾರ ನೀಡಲಾಗಿದೆ.
ಪ್ರಾಧ್ಯಾಪಕರು ನಡೆಸಿದ ಸಂಶೋಧನೆ, ಪ್ರಕಟಿಸಿದ ಸಂಶೋಧನಾ ಪ್ರಬಂಧಗಳು, ಸಮಾಜಮುಖಿ ಕಾರ್ಯಗಳು ಸೇರಿದಂತೆ ವಿದ್ಯಾರ್ಥಿಗಳಿಗೆ ತಾಂತ್ರಿಕ ಜ್ಞಾನ ಹೆಚ್ಚಿಸಲು ಮಹಾವಿದ್ಯಾಲಯವು ತೆಗೆದುಕೊಂಡಿರುವ ಹಲವು ಉಪಕ್ರಮಗಳನ್ನು ಈ ಸ್ಪರ್ಧೆಯಲ್ಲಿ ಪರಿಗಣಿಸಲಾಗಿದೆ.
ಐಇಐ ಮಹಾವಿದ್ಯಾಲಯದ ಗುಣಮಟ್ಟವನ್ನು ಗುರುತಿಸಿ ಪುರಸ್ಕರಿಸಿರುವುದು ಸಂತಸ ತಂದಿದೆ ಎಂದು ಆಡಳಿತ ಮಂಡಳಿ ಅಧ್ಯಕ್ಷ ವಿನಾಯಕ ಲೋಕುರ್ ಹೇಳಿದ್ದಾರೆ.
ಐಇಐನ ಈ ಪುರಸ್ಕಾರವು ಗುಣಮಟ್ಟದ ತಾಂತ್ರಿಕ ಶಿಕ್ಷಣವನ್ನು ನೀಡಲು ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡಿದಂತಾಗಿದೆ ಎಂದು ಪ್ರಾಚಾರ್ಯ ಡಾ.ವಿ.ಎ.ಕುಲಕರ್ಣಿ ಹೇಳಿದ್ದಾರೆ. ಡಾ. ವೆಂಕಟೇಶ ಶಂಕರ್, ಐಕ್ಯೂಎಸಿ ಸಂಚಾಲಕ ಪ್ರೊ.ವರಪ್ರಸಾದ್ ಗಾಂವಕರ್, ಐಇಐ ಸಂಚಾಲಕ ಪ್ರೊ. ಕಾರ್ತಿಕ ಕುಲಕರ್ಣಿ ಹಾಗೂ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.