ಸಿದ್ದಾಪುರ: ಸಂಸ್ಕಾರದ ಜೊತೆ ಸದಾಚಾರ ಇದ್ದರೆ ಬ್ರಾಹ್ಮಣ ಆಗುತ್ತಾನೆ,. ಸಂಸ್ಕಾರ, ಸದಾಚಾರದಿಂದ ಬ್ರಾಹ್ಮಣ್ಯವೃದ್ಧಿ ಆಗುತ್ತದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ಅಧ್ಯಕ್ಷ, ಹಿರಿಯ ನ್ಯಾಯವಾದಿ ಅಶೋಕ ಹಾರ್ನಳ್ಳಿ ಹೇಳಿದರು.
ಗುರುವಾರ ತಾಲೂಕಿನ ಕಲಗದ್ದೆಯ ಶ್ರೀನಾಟ್ಯ ವಿನಾಯಕ ಹಾಗೂ ಶ್ರೀಲಲಿತಾ ರಾಜರಾಜೇಶ್ವರಿ ದೇವಾಲಯದಲ್ಲಿ ನಡೆಯುತ್ತಿರುವ ಗಾಯತ್ರೀ ಮಹಾಸತ್ರ ಮಹಾ ಸಂಕಲ್ಪದ ೬೦ನೇ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಭಗವಂತನ ಹತ್ರ ದೊಡ್ಡವರು ಎಂದು ಹೋಗಬಾರದು. ದೇವರ ಎದುರು ಯಾರೂ ವಿಐಪಿಯಲ್ಲ. ವಿಐಪಿಯಾದರೆ ದೇವರ ಬಳಿ ಹೋಗಲು ಸಾಧ್ಯವಿಲ್ಲ. ಸಾಮಾನ್ಯರಲ್ಲಿ ಸಾಮಾನ್ಯರಾಗಿ ದೇವರ ಬಳಿ ಹೋದರೆ ಮಾತ್ರ ಭಗವಂತನ ಕೃಪೆ ಸಾಧ್ಯವಿದೆ. ಯಾರು ದೊಡ್ಡವರು ಎಂದು ಕೊಳ್ಳುತ್ತಾರೆ ಅವರು ಜೀವನದಲ್ಲಿ ಮುಂದೆ ಹೋಗಲು ಸಾಧ್ಯವಿಲ್ಲ. ಗಾಯತ್ರೀ ಮಹಾ ಯಜ್ಞ ಇದೊಂದು ದೈವ ಪ್ರೇರಣೆಯಿಂದ ಆಗುತ್ತದೆ. ದೈವ ಪ್ರೇರಣೆಯಿಂದ ಯಾವ ಕೆಲಸ ಆಗುತ್ತದೆ ಅದನ್ನು ಮಾಡಬೇಕು. ಬ್ರಾಹ್ಮಣರು ಬ್ರಾಹ್ಮಣರಾಗಿ ಉಳಿಯಲು ಗಾಯತ್ರೀಯಿಂದ ಮಾತ್ರ ಸಾಧ್ಯ. ಮಾಡುವದು ಒಳ್ಳೆಯ ಕೆಲಸ ಯಾವುದಿದೋ ಅದಕ್ಕೆ ರಾಹುಕಾಲ ಕೇಳಬೇಕಿಲ್ಲ. ಒಳ್ಳೆಯ ಕೆಲಸಕ್ಕೆ ಶ್ರದ್ದೆಯಿಂದ ಮುನ್ನಡೆಯಬೇಕು. ಪರಂಪರೆಯ ಸಂಸ್ಕಾರ, ಋಷಿ ಪ್ರಣೀತ ಮಾರ್ಗದಲ್ಲಿ ಹೋಗಬೇಕು ಎಂದರು.
ಹವ್ಯಕ ಮಹಾ ಮಂಡಲ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಮಾತನಾಡಿ, ಧರ್ಮ ಸಂಸ್ಕೃತಿಯ ಉಳಿವಿಗೆ ನೆರವಾಗಬೇಕು. ಎಲ್ಲರೂ ಸರಳತೆ, ಧಾರ್ಮಿಕತೆ ಬೆಳಸಿಕೊಳ್ಳಬೇಕು. ಇಲ್ಲಿ ನಡೆಯುವ ಗಾಯತ್ರೀ ಮಹಾ ಯಜ್ಞವು ತೇಜೋ ಹೀನತೆ ತಪ್ಪಿಸುತ್ತದೆ ಎಂದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ಉಪಾಧ್ಯಕ್ಷ ಶಶಿಭೂಷಣ ಹೆಗಡೆ ದೊಡ್ಮನೆ ಮಾತನಾಡಿ, ಸಮಸ್ತ ವಿಪ್ರರೂ ಗಾಯತ್ರೀ ಹವನದಲ್ಲಿ ಪಾಲ್ಗೊಳ್ಳಬೇಕು. ಪಾಪ ಕಳೆದು ಕೊಂಡು ಪುಣ್ಯ ಪಡೆಯಲು ಸಾಧ್ಯ ಎಂದರು. ವಿದ್ವಾಂಸರಾದ ಗಣಪತಿ ಭಟ್ಟ ಮಾತನಾಡಿ, ಇದೊಂದು ಅಪರೂಪದ ನೆಲೆ. ಪುಣ್ಯಕ್ಷೇತ್ರ. ಇಷ್ಟೊಂದು ಪ್ರಸಾದ ಆಗುವದನ್ನು ಅನುಭವಿಸಿದೆ ಎಂದರು. ರಾಘವೇಂದ್ರ ಹೆಗಡೆ ನಿರ್ವಹಿಸಿದರು. ರಶ್ಮಿ ಹೆಗಡೆ ವಂದಿಸಿದರು. ಇದೇ ವೇಳೆ ಅಶೋಕ ಹಾರ್ನಳ್ಳಿ ಅವರನ್ನು ಅತ್ಮೀಯವಾಗಿ ಗೌರವಿಸಲಾಯಿತು.
ದೊಡ್ಡ ದೊಡ್ಡ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು. ಆದರೆ, ಪೂರ್ವಿಕರಿಂದ ಬಂದ ಸಂಸ್ಕೃತಿ, ಧರ್ಮ ಬೆಳೆಸುವದು ಸುಲಭವಲ್ಲ. ಅಂಥ ಪವಿತ್ರ ಕೆಲಸ ಕಲಗದ್ದೆಯಲ್ಲಿ ನಡೆಯುತ್ತಿದೆ.
ಅಶೋಕ ಹಾರ್ನಳ್ಳಿ, ಅಧ್ಯಕ್ಷರು ಬ್ರಾಹ್ಮಣ ಮಹಾ ಸಭಾ, ಬೆಂಗಳೂರು
ಕಲಗದ್ದೆಯ ಗಾಯತ್ರೀ ಮಹಾ ಸತ್ರಕ್ಕೆ ಎಲ್ಲ ಅರ್ಹ ಉಪನೀತರು ಪಾಲ್ಗೊಳ್ಳಬೇಕು. ಸಮಸ್ತರೂ ಪಾಲ್ಗೊಳ್ಳಬೇಕು ಎಂದು ಶ್ರೀರಾಮಚಂದ್ರಾಪುರ ಮಠಾಧೀಶರೂ ಸೂಚಿಸಿದ್ದಾರೆ.
ಮೋಹನ ಭಾಸ್ಕರ ಹೆಗಡೆ, ಅಧ್ಯಕ್ಷರು ಹವ್ಯಕ ಮಹಾ ಮಂಡಲ, ಶ್ರೀರಾಮಚಂದ್ರಾಪುರಮಠ