ಸಿದ್ದಾಪುರ: ಪಟ್ಟಣದ ಶಂಕರಮಠದ ಸಭಾಂಗಣದಲ್ಲಿ ಪತ್ರಕರ್ತ ನಾಗರಾಜ ಭಟ್ಟ ಕೆಕ್ಕಾರ್ ರಚಿಸಿದ ದಕ್ಷಿಣದ ಬಾರ್ಡೋಲಿ ಸಿದ್ದಾಪುರದ ಗಂಡುಗಲಿಗಳು ಕೃತಿ ಲೋಕಾರ್ಪಣೆ ಗುರುವಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಅಧ್ಯಕ್ಷತೆವಹಿಸಿ ಮಾತನಾಡಿದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ ಹಾರನಹಳ್ಳಿ ಸಾಮಾನ್ಯ ಜನರ ತ್ಯಾಗದ ಮೇಲೆ ನಮ್ಮ ಸ್ವಾತಂತ್ಯ ನಿಂತಿದೆ. ಪ್ರಶಸ್ತಿ, ಪ್ರಚಾರ ಮತ್ತು ಅಧಿಕಾರದ ಆಸೆ ಪಡದೆ ಕೇವಲ ದೇಶಕ್ಕಾಗಿ ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿದರು. ಮಹಿಳೆಯರ ಸ್ವಾತಂತ್ರ್ಯದ ಕುರಿತು ಈಗ ನಾವು ಚರ್ಚೆ ಮಾಡುತ್ತಿದ್ದೇವೆ. ಆದರೆ ಆಗಿನ ಕಾಲದಲ್ಲಿ ಮಹಿಳೆಯರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದು ನಮ್ಮ ಇತಿಹಾಸ. ಇಂತಹ ಪುಸ್ತಕಗಳು ಮಕ್ಕಳಿಗೆ ಪಠ್ಯವಾಗಿ ಬಂದರೆ ಮುಂದಿನ ಪೀಳಿಗೆಗೆ ನಮ್ಮ ಇತಿಹಾಸ ತಿಳಿಸಿದಂತೆ ಆಗುತ್ತದೆ ಎಂದರು.
ಕೃತಿ ಬಿಡುಗಡೆ ಮಾಡಿ ಮಾತನಾಡಿದ ಖ್ಯಾತ ಸಾಹಿತಿ ಗಜಾನನ ಶರ್ಮಾ ಹುಕ್ಕಲು ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳನ್ನು ರಸ್ತೆಗಳಿಗೆ, ವೃತ್ತಗಳಿಗೆ ಇಡಲು ಸಾಧ್ಯವಾಗದಿದ್ದರೆ ನಮ್ಮ ಮುಂದಿನ ಪೀಳಿಗೆಯ ಮಕ್ಕಳಿಗೆ ತಲುಪಿಸುವ ಕೆಲಸ ಆದರೆ ಮಾತ್ರ ಸ್ವಾತಂತ್ರ್ಯ ಹೋರಾಟದ ಇತಿಹಾಸ ಶಾಶ್ವತವಾಗಿರುತ್ತದೆ. ಸ್ವಾತಂತ್ರ್ಯ ಹೋರಾಟಗಾರರು ತಮ್ಮ ನಿತ್ಯದ ಚಟುವಟಿಕೆಗಳನ್ನು, ಹಬ್ಬ ಹರಿದಿನಗಳನ್ನು ಚಳುವಳಿಯನ್ನಾಗಿ ಪರಿವರ್ತಿಸಿದರು. ಆ ಕಾರಣದಿಂದ ಚಳುವಳಿ ಯಶಸ್ಸು ಪಡೆಯಲು ಸಾಧ್ಯವಾಯಿತು.ನಾಗರಾಜ ಭಟ್ಟ ಮೂಲತಃ ಹೊನ್ನಾವರದ ತಾಲ್ಲೂಕಿನ ಕೆಕ್ಕಾರನವರಾದರೂ ಸಿದ್ದಾಪುರಕ್ಕೆ ಬಂದು ಇಲ್ಲಿನ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಪುಸ್ತಕ ಬರೆದಿರುವುದು ಶ್ಲಾಘನೀಯವಾಗಿದೆ. ಮಾವಿನಗುಂಡಿಯಲ್ಲಿರುವ ಮಹಿಳಾ ಸ್ವಾತಂತ್ರö್ಯ ಸ್ಮಾರಕ ಇಂದು ನೆನೆಗುದಿಗೆ ಬಿದ್ದಿದೆ. ಸ್ವಾತಂತ್ರ್ಯ ಹೋರಾಟಗಾರರ ಕುರಿತು ಯಾಕಿಷ್ಟು ತಾತ್ಸಾರ ಆಡಳಿತ ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಿದ್ದಾಪುರ ಶಂಕರ ಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ, ಶಿಕ್ಷಣ ಪ್ರಸಾರಕ ಸಮಿತಿ ಉಪಾಧ್ಯಕ್ಷ ಡಾ.ಶಶಿಭೂಷಣ ಹೆಗಡೆ, ಸಾಗರದ ತಹಸೀಲ್ದಾರ ಚಂದ್ರಶೇಖರ ನಾಯ್ಕ ಮಾತನಾಡಿದರು. ಪತ್ರಕರ್ತ ನಾಗರಾಜ ಮತ್ತಿಗಾರ್ ಕೃತಿ ಪರಿಚಯಿಸಿದರು. ಡಾ.ಶಂಕರಪ್ರಸಾದ ಸಂದೇಶ ಪತ್ರ ವಾಚಿಸಿದರು. ಸುಜಾತಾ ಹೆಗಡೆ ಕಾಗಾರಕೊಡ್ಲು ವಂದೇ ಮಾತರಂ ಗೀತೆ ಹಾಡಿದರು. ಲೇಖಕ ನಾಗರಾಜ ಭಟ್ಟ ಕೆಕ್ಕಾರ್ ಸ್ವಾಗತಿಸಿ ಪ್ರಾಸ್ತವಿಕ ಮಾತನಾಡಿದರು. ಡಾ.ಪೃಥ್ವಿ ಶಂಕರಪ್ರಸಾದ ಪ್ರಾರ್ಥನೆ ಹಾಡಿದರು.ಮಂಜುನಾಥ ಭಟ್ಟ ವಂದಿಸಿದರು.ಗಣಪತಿ ಹೆಗಡೆ ಗುಂಜಗೋಡ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ತಾಲೂಕಿನ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.