ಭಟ್ಕಳ: ಸಂಜೆ ಮುಳುಗಿದ ಸೂರ್ಯನು ಬೆಳಿಗ್ಗೆ ಬಂದು ಬೆಳಗಲು ಕಾಯಬೇಕು. ಚಂದ್ರನೂ ಹಾಗೆ. ಎಲ್ಲವದಕ್ಕೂ ಒಂದು ಸಮಯವಿರುತ್ತದೆ. ಆ ಸಮಯಕ್ಕಾಗಿ ನಾವು ಕಾಯಲೆಬೇಕು ಎಂದು ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರು ಹೇಳಿದರು.
ಅವರು ಭಟ್ಕಳ ಪಟ್ಟಣದ ವಡೇರಮಠದಲ್ಲಿ ಸ್ವರ್ಣ ಕೀರಿಟ ಸಮರ್ಪಣೆ ಮಾಡಲು ದೇಣಿಗೆ ನೀಡಿದ ದಾನಿಗಳಿಗೆ ಹಾಗೂ ರಾಜ್ಯೋತ್ಸವ ಪ್ರಶಸ್ತಿ ವಿಜೇತರಿಗೆ ಗೌರವಿಸಿ ಭಕ್ತರಿಗೆ ಆಶೀರ್ವಚನ ನೀಡಿದರು. ದಾನಕ್ಕಿಂತ ಶ್ರೇಷ್ಟವಾದದು ಯಾವುದು ಇಲ್ಲ. ಹಣವಂತರಿಗೂ ಸಿಗದ ಗೌರವ ದಾನಿಗಳಿಗೆ ಸಿಗುತ್ತದೆ. ದಾನದ ವಿಷಯದಲ್ಲಿ ಇಂದಿಗೂ ನಾವು ದಾನಶೂರ ಕರ್ಣನನ್ನು ಸ್ಮರಿಸಿಕೊಳ್ಳುತ್ತೇವೆ. ದಾನ ನೀಡುವಾಗಲೂ ತನ್ನ ಹೆಸರು ಬರಬೇಕು ಎನ್ನುವ ಆಸೆ ಬಿಟ್ಟು ಇದಂ ನ ಮಮ ಎನ್ನುವ ರೀತಿಯಲ್ಲಿ ನೀಡಬೇಕು. ಒಮ್ಮೆ ದಾನ ನೀಡಿದರೆ ಅದು ನಮ್ಮದಲ್ಲ ಎನ್ನುವ ಭಾವನೆ ಇರಬೇಕು ಎಂದು ದ್ವಾಪರ ಯುಗದ ನಿದರ್ಶನ ನೀಡಿ ಭಕ್ತರಿಗೆ ವಿವರಿಸಿದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ವೈದ್ಯಕೀಯ ರಂಗದಲ್ಲಿ ಸಾಧನೆ ಮಾಡಿದ ಡಾ. ಸವಿತಾ ಕಾಮತ, ಕಲಾ ಕ್ಷೇತ್ರದಲ್ಲಿ ಸಾಧನೆ ಮೆರೆದ ರಾಜರಾಮ ಪ್ರಭು, ಕಿರಿಯ ವಯಸ್ಸಿನಲ್ಲಿ ಕರಾಟೆಯಲ್ಲಿ ಸಾಧನೆ ಮಾಡಿ ತಾಲೂಕಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಪ್ರಣವಿ ರಾಮಚಂದ್ರ ಕಿಣಿ ಇವರ ಸಾಧನೆಗೆ ಶ್ರೀಗಳು ಹರಸಿ, ಆಶೀರ್ವಾದದ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಜಿಎಸ್ಬಿ ಸಮಾಜದ ಅಧ್ಯಕ್ಷ ಸುಬ್ರಾಯ ಕಾಮತ ಸ್ವಾಗತಿಸಿ ಶ್ರೀಗಳು ದೇಣಿಗೆ ಸಂಗ್ರಹಿಸುವಾಗ ಯಾರ ಮನಸ್ಸನ್ನು ನೋಯಿಸಿಬಾರದು, ಒತ್ತಾಯಪೂರ್ವಕವಾಗಿ ಹಣ ಕೇಳಬಾರದು. ಎಷ್ಟೇ ಹಣ ಕಡಿಮೆ ಬಿದ್ದರೂ ನಮ್ಮ ಮಠದಿಂದ ನೀಡುತ್ತೇವೆ ಎಂದು ಹೇಳಿದನ್ನು ಸ್ಮರಿಸಿಕೊಂಡರು ಮಂಜುನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಸನ್ನ ಪ್ರಭು ಕಾರ್ಯಕ್ರಮ ನಿರ್ವಹಿಸಿದರು. ಹಾಂಗ್ಯೋ ಐಸ್ಕ್ರೀಮ್ ಪ್ರದೀಪ ಪೈ, ಜಗದೀಶ ಪೈ, ಸತೀಶ ಪೈ, ದಿನೇಶ ಪೈ, ಹಿರಿಯರಾದ ನರೇಂದ್ರ ನಾಯಕ, ನಾಗೇಶ ಕಾಮತ, ಉದಯ ಪ್ರಭು, ಅಚ್ಯುತ ಕಾಮತ ಇತರರು ಇದ್ದರು.