ಕುಮಟಾ: ಶಾಸಕ ದಿನಕರ ಶೆಟ್ಟಿ ಅವರು ಇಂದು ಸೋಮವಾರ ಕುಮಟಾ ತಾಲೂಕಿನ ಸಂತೆಗುಳಿ ಪ್ರೌಢಶಾಲೆಯ ಸಭಾಭವನದಲ್ಲಿ ಸಂತೆಗುಳಿ ಹಾಗೂ ಸೊಪ್ಪಿನಹೊಸಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ 33 ಫಲಾನುಭವಿಗಳಿಗೆ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ಉಚಿತ ಗ್ಯಾಸ್ ಸಿಲೆಂಡರ್ ಗಳನ್ನು ಹಸ್ತಾಂತರಿಸಿದರು.
ನಂತರ ಮಾತನಾಡಿದ ಶಾಸಕರು, ನಮ್ಮ ದೇಶಕ್ಕೆ ಸ್ವಾತಂತ್ರ್ಯಬಂದು ಇಷ್ಟು ವರ್ಷಗಳಲ್ಲಿ ಯಾವುದೇ ಸರ್ಕಾರಗಳು ಮಾಡಿರದ ಹಲವು ಮಹತ್ವಪೂರ್ಣ ಯೋಜನೆಗಳನ್ನು ಸನ್ಮಾನ್ಯ ನರೇಂದ್ರ ಮೋದೀಜಿಯವರು ಕಾರ್ಯರೂಪಕ್ಕೆ ತಂದಿದ್ದಾರೆ. ಅಂತಹ ಯೋಜನೆಗಳಲ್ಲಿ ಉಜ್ವಲಾ ಯೋಜನೆಯೂ ಒಂದು. ತಾಯಂದಿರ ಆರೋಗ್ಯದ ಹಿತದೃಷ್ಟಿಯಿಂದ ಈ ಯೋಜನೆಯನ್ನು ನೀಡಲಾಗಿದೆ. ಕುಮಟಾ ತಾಲೂಕಿನಲ್ಲಿ ಇದುವರೆಗೆ ಹತ್ತು ಸಾವಿರಕ್ಕೂ ಅಧಿಕ ಮಹಿಳೆಯರು ಉಚಿತ ಗ್ಯಾಸ್ ಸಿಲಿಂಡರ್ ಪಡೆದಿದ್ದಾರೆ. ಮೋದೀಜಿ ಪ್ರಧಾನಿ ಆಗುವುದಕ್ಕೂ ಪೂರ್ವದಲ್ಲಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಲು ಎರಡುದಿನಗಳು ಕಾಯಬೇಕಿತ್ತು. ಆದರೆ ಇಂದು ಹಳ್ಳಿಹಳ್ಳಿಗಳಿಗೂ ಸಿಲಿಂಡರ್ ಗಳನ್ನು ತಲುಪಿಸಲಾಗುತ್ತಿದೆ. ಸಂತೆಗುಳಿ ಹಾಗೂ ಸೊಪ್ಪಿನ ಹೊಸಳ್ಳಿ ಭಾಗದಲ್ಲಿ ತೀರಾ ಹಿಂದುಳಿದ ಹಳ್ಳಿಗಳಿದ್ದು, ಇಂತಹ ಗುಡ್ಡಗಾಡು ಪ್ರದೇಶಗಳಿಗೂ ವಿದ್ಯುತ್ ಸಂಪರ್ಕವನ್ನು ದೀನದಯಾಳ್ ಯೋಜನೆಯಡಿಯಲ್ಲಿ ಮೋದೀಜಿಯವರು ಕಲ್ಪಿಸಿಕೊಟ್ಟಿದ್ದಾರೆ. ಕಿಸಾನ್ ಸಮ್ಮಾನ್ ಯೋಜನೆ ಇರಬಹುದು, ಅಯುಷ್ಮಾನ್ ಭಾರತ್ ಯೋಜನೆ ಇರಬಹುದು ಇಂತಹ ಅನೇಕ ಜನಪರ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸಿದ ಕೀರ್ತಿ ನರೇಂದ್ರ ಮೋದಿಜಿ ನೇತೃತ್ವದ ಕೇಂದ್ರಸರ್ಕಾರಕ್ಕೆ ಸಲ್ಲುತ್ತದೆ ಎಂದರು.
ಮಂಡಲ ಬಿಜೆಪಿ ಉಪಾಧ್ಯಕ್ಷ ಹಾಗೂ ಗ್ರಾ. ಪಂ. ಮಾಜಿ ಅಧ್ಯಕ್ಷ ವಿನಾಯಕ ಭಟ್, ಸೊಪ್ಪಿನ ಹೊಸಳ್ಳಿ ಗ್ರಾ. ಪಂ. ಅಧ್ಯಕ್ಷೆ ಶೈಲಾ ಗಜಾನನ ನಾಯ್ಕ, ಸದಸ್ಯರುಗಳಾದ ಮಾದೇವಿ ಮುಕ್ರಿ, ಭಾರತಿ ಮುಕ್ರಿ, ತ್ರಿವೇಣಿ ಮರಾಠಿ, ಜಮಾಲ್ ಸಾಬ್, ಅಬ್ದುಲ್ ಖಾದರ್, ಭಾರತ್ ಗ್ಯಾಸ್ ಏಜನ್ಸಿ ವ್ಯವಸ್ಥಾಪಕ ವೆಂಕಟೇಶ್ ನಾಯ್ಕ, ಶಕ್ತಿಕೇಂದ್ರ ಪ್ರಮುಖ್ ವಿನಾಯಕ ನಾಯ್ಕ, ಪ್ರಮುಖ ಕಾರ್ಯಕರ್ತರಾದ ಗಜಾನನ ನಾಯ್ಕ, ಹನುಮಂತ ನಾಯ್ಕ, ರಾಘು ಭಂಡಾರಿ, ನಾರಾಯಣ ಗೌಡ, ದಾಮೋದರ ಮರಾಠಿ ಹಾಗೂ ಇತರರು ಇದ್ದರು.