ಶಿರಸಿ: ನೀವು ಈ ಸಲ ಲೋಕಸಭಾ ಚುನಾವಣೆಗೆ ತಪ್ಪದೇ ಸ್ಪರ್ಧೆ ಮಾಡಬೇಕು. ನೀವು ಸ್ಪರ್ಧಿಸಿದರೆ ಮಾತ್ರ ಬಿಜೆಪಿಗೆ ಶಕ್ತಿ. ನಮಗೂ ಹೆಚ್ಚಿನ ಉತ್ಸಾಹ. ನೀವೇ ಸ್ಪರ್ಧೆಯ ಉತ್ಸಾಹ ತೋರದೇ ಹಿಂದೇಟು ಹಾಕಿದರೆ, ಹೈ ಕಮಾಂಡ್ ಹೇಗೆ ಟಿಕೆಟ್ ನೀಡಬೇಕು? ನೀವು ಈ ಬಾರಿ ಒಪ್ಪಿಕೊಳ್ಳಬೇಕು ಎಂದು ಸಂಸದ ಅನಂತಕುಮಾರ ಹೆಗಡೆ ಅಭಿಮಾನಿಗಳು ಭಾನುವಾರ ಅವರ ಮನೆಗೆ ಆಗಮಿಸಿ ಆಗ್ರಹಿಸಿದರು.
ಮುಂದಿನ ಆರು ತಿಂಗಳೊಳಗೆ ನಡೆಯಲಿರುವ ಲೋಕಸಭೆಗೆ ಮತ್ತೆ ಸ್ಪರ್ಧಿಸಲು ಹಿಂದೇಟು ಹಾಕುತ್ತಿರುವ ಸಂಸದ ಹೆಗಡೆ ಅವರನ್ನು ಒಪ್ಪಿಸಲು ಅಭಿಮಾನಿಗಳು ಮನೆಗೆ ಜಮಾಯಿಸಿ ಹರಸಾಹಸ ನಡೆಸಿದ್ದಾರೆ. ಕಳೆದ ಲೋಕಸಭೆ ಚುನಾವಣೆ ನಂತರದ ಒಂದು ವರ್ಷ ಹೊರತಾಗಿ, ನಂತರದಲ್ಲಿ ಸಕ್ರೀಯವಾಗಿರದ ಅನಂತಕುಮಾರ ಹೆಗಡೆ ಈ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸುವ ಬಗ್ಗೆ ನಿರಾಸಕ್ತಿ ವ್ಯಕ್ತಪಡಿಸಿದ್ದರು. ಆದರೆ, ಅವರ ಅಭಿಮಾನಿಗಳು ಅನಂತಕುಮಾರ ಹೆಗಡೆ ಅವರ ನಿರ್ಧಾರವನ್ನು ಒಪ್ಪಿಕೊಂಡಿಲ್ಲ. ಹಿಂದು ಫೈರ್ ಬ್ರಾಂಡ್ ಎಂದೇ ಖ್ಯಾತಿಯಾಗಿರುವ ಅನಂತಕುಮಾರ ಹೆಗಡೆ ರಾಷ್ಟ್ರಾಭಿಮಾನದ ಖಡಕ್ ಮಾತು, ಚಿಂತನೆಗಳ ಮೂಲಕವೇ ಜಿಲ್ಲೆಯ ಮನೆಮಾತಾಗಿದ್ದಾರೆ. ಹೀಗಾಗಿ ಅವರೇ ಮತ್ತೆ ಸಕ್ರೀಯರಾಗಬೇಕು, ಅಭ್ಯರ್ಥಿಯಾಗಬೇಕು ಎಂಬುದು ಅಭಿಮಾನಿಗಳ ಆಶಯವಾಗಿತ್ತು.
ಕಾರ್ಯಕರ್ತರ ಅಭಿಪ್ರಾಯ ಕಡೆಗಣಿಸುವುದು ಮೂರ್ಖತನವಾದಿತು ಎಂದ ಸಂಸದ
ಮನೆಗೆ ಜಮಾಯಿಸಿದ ಅಭಿಮಾನಿಗಳೊಂದಿಗೆ ಮಾತನಾಡಿದ ಅನಂತಕುಮಾರ ಹೆಗಡೆ,” ಕಳೆದ 15 ವರ್ಷದಿಂದ ರಾಜಕೀಯದಿಂದ ಹಿಂದೆ ಸರಿಯುವ ಬಗ್ಗೆ ಹೇಳುತ್ತಲೇ ಬಂದಿದ್ದೇನೆ. ನಾಲ್ಕೈದು ವರ್ಷದಿಂದ ಈ ತೀರ್ಮಾನ ಗಟ್ಟಿಗೊಳಿಸಿಕೊಂಡಿದ್ದೇನೆ. ಈಗ ಯು ಟರ್ನ್ ಮಾಡಿಬಿಟ್ರೆ ಗಾಡಿ ಪಲ್ಟಿ ಆಗುವ ಸಂಭವ ಇರುತ್ತದೆ. ನಿಮ್ಮ ಅಭಿಮಾನಕ್ಕೆ ಋಣಿಯಾಗಿದ್ದೇನೆ. ನಾನು ರಾಜಕೀಯದಲ್ಲಿ ಇರಲಿ, ಇಲ್ಲದಿರಲಿ, ದೇಶದ ಕೆಲಸದಿಂದ ಹಿಂದೆ ಸರಿದಿಲ್ಲ. ರಾಜಕಾರಣವೊಂದೇ ದೇಶದ ಕೆಲಸ ಮಾಡಲು ದಾರಿ ಅಂದೇನಿಲ್ಲ. ಸಾಮಾಜಿಕ ಹೊಣೆಗಾರಿಕೆಯಿಂದ ಜಾರಿಕೊಳ್ಳಲು ನನಗೆ ಈ ಬದುಕಿನಲ್ಲಿ ಸಾಧ್ಯವಿಲ್ಲ” ಎಂದರು.
ಆದರೆ, ಅನಂತಕುಮಾರ ಹೆಗಡೆ ಅವರ ಈ ನಿರ್ಧಾರಕ್ಕೆ ಮುಂದುವರಿಯಲು ಅಭಿಮಾನಿಗಳು ಸಿದ್ಧರಿರಲಿಲ್ಲ. ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಕೆಜಿ ನಾಯ್ಕ ಹಣಜಿಬೈಲ್ ಮಾತನಾಡಿ,”ನೀವು ಸ್ಪರ್ಧೆಯಿಂದ ಹಿಂದೆ ಸರಿದರೆ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಬಲವಾಗುತ್ತದೆ. ನೀವು ಕಣಕ್ಕಿಳಿದರೆ ಕಾಂಗ್ರೆಸ್ ಗೆಲುವಿನ ಆಸೆ ಬಿಟ್ಟು ಅಭ್ಯರ್ಥಿಯನ್ನೇ ಬದಲಾಯಿಸುತ್ತದೆ. ಹೀಗಾಗಿ, ಕೊನೆಯ ಕ್ಷಣದವರೆಗೆ ಕಾಯುವುದು ಸೂಕ್ತವಲ್ಲ” ಎಂದರು.
ಕ್ಷೇತ್ರದಲ್ಲಿ ಹೊಸಬರು ಬೇಕೆಂದರೆ ಮುಖ ಪರಿಚಯ ಆದ್ರೂ ಇರಬೇಕು. ಕಿತ್ತೂರು ಖಾನಾಪುರದಲ್ಲಿ ಅನಂತಕುಮಾರ ಹೆಗಡೆ ಹೆಸರು ಕೇಳಿ ಓಟ್ ಹಾಕ್ತಾರೆ ಎಂದು ಕಿತ್ತೂರು ಭಾಗದ ಅಭಿಮಾನಿಗಳು ಆಗ್ರಹ ವ್ಯಕ್ತಪಡಿಸಿದರು. ನಾವು ನಿಮ್ಮ ಜೊತೆ ರಕ್ತ ಹಂಚಿಕೊಂಡು ಬಂದವರು. ಆತ್ಮೀಯತೆಯಿಂದ ಕೇಳ್ತೇವೆ, ಕುಟುಂಬದ ಸದಸ್ಯನನ್ನಾಗಿ ಜಿಲ್ಲೆ ನೋಡಿದೆ. ಮನೆ ಮಗನನ್ನಾಗಿ ನೋಡಿದೆ. ನೀವು ಸ್ಪರ್ಧಿಸಿದರಷ್ಟೇ ಬಿಜೆಪಿಗೆ ಶಕ್ತಿ ಬರಲಿದೆ ಎಂದು ಇನ್ನು ಕೆಲ ಅಭಿಮಾನಿಗಳು ಆಗ್ರಹಿಸಿದರು.
ಸುಮಾರು ಮುಕ್ಕಾಲು ತಾಸು ಚರ್ಚೆಯ ಬಳಿಕ ಮಾತನಾಡಿದ ಅನಂತಕುಮಾರ ಹೆಗಡೆ, ಚುನಾವಣೆಗೆ ಇನ್ನೂ ಸಮಯ ಇದೆ. ರಾಮಜನ್ಮ ಭೂಮಿಯಲ್ಲಿ ಮಂದಿರ ಉದ್ಘಾಟನೆ ಕಾರ್ಯಕ್ರಮಗಳೆಲ್ಲ ಮುಗಿಯಲಿ, ಎಲ್ಲ ಒಮ್ಮೆ ಕುಳಿತು ಮಾತಾಡೋಣ. ಎಲ್ಲರ ತೀರ್ಮಾನ ಹೇಗಿದೆ ಹಾಗೇ ಆಗಲಿ. ಕಾರ್ಯಕರ್ತರ ಅಭಿಪ್ರಾಯ ಕಡೆಗಣಿಸುವುದೂ ಮೂರ್ಖತನವಾಗುತ್ತದೆ ಎಂದರು.
ಈ ವೇಳೆ ಅಭಿಮಾನಿಗಳಾದ ಮಾರುತಿ ನಾಯ್ಕ, ಸುಬ್ರಾಯ ವಾಳ್ಕೆ, ಗಜು ನಾಯ್ಕ, ಸುಧೀರ ಕೊಂಡ್ಲಿ, ಬಲರಾಮ ನಾಮಧಾರಿ ಸೇರಿದಂತೆ ಹಲವರು ಇದ್ದರು.
ಹೊನ್ನಾವರ, ಕರ್ಕಿ, ಮಂಕಿ ಭಾಗದ ಅಭಿಮಾನಿಗಳು ಶ್ರೀಕುಮಾರ ಸಮೂಹ ಸಂಸ್ಥೆಗಳ ಮುಖ್ಯಸ್ಥ ವೆಂಕಟ್ರಮಣ ಹೆಗಡೆ ಅವರ ನೇತೃತ್ವದಲ್ಲಿ ಆಗಮಿಸಿ ಅನಂತಕುಮಾರ ಅವರನ್ನು ಭೇಟಿಯಾಗಿ ಚುನಾವಣೆಗೆ ಸ್ಪರ್ಧಿಸಲು ಒಪ್ಪಿಕೊಳ್ಳುವಂತೆ ವಿನಂತಿಸಿದರು.