
ಶಿರಸಿ: ಚುಮುಚುಮು ಚಳಿಯಲ್ಲಿ ಸಿಹಿಯಾದ ಕಬ್ಬಿನ ಹಾಲು ಜೊತೆಗೆ ಒಂದಿಷ್ಟು ಮಂಡಕ್ಕಿ ಮಿರ್ಚಿ, ಶೇಂಗಾ.. ಪಕ್ಕದಲ್ಲೇ ಉರಿಯುತ್ತಿರುವ ಆಲೇಒಲೆಯಿಂದ ಸೂಸುತ್ತಿರುವ ಬೆಲ್ಲದ ಘಮಲು ಜೊತೆಗೊಂದಿಷ್ಟು ನೊರೆಬೆಲ್ಲ… ಇವಕ್ಕೆಲ್ಲ ಸಾಕ್ಷಿಯಾಗಿದ್ದು ತವರು ಮನೆಯ “ಆಲೇಮನೆ ಹಬ್ಬ”.
ತಾಲೂಕಿನ ಭೂಸನಕೇರಿಯಲ್ಲಿನ ತವರು ಮನೆ ಹೋಂ ಸ್ಟೇಯಲ್ಲಿ ಮಲೆನಾಡಿನ ಆಕರ್ಷಣೆಗಳಲ್ಲೊಂದಾದ ಆಲೇಮನೆ ಹಬ್ಬ ಆರಂಭವಾಗಿದೆ. ಮಲೆನಾಡಿನ ವಿಶಿಷ್ಟ ಸಾಂಪ್ರದಾಯಿಕ ಆಚರಣೆಗಳಲ್ಲೊಂದಾದ ಆಲೇಮನೆಯು ಆಧುನಿಕತೆಯ ಸೋಗಿನಲ್ಲಿ ಕಣ್ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ಇಂದಿನ ಪೀಳಿಗೆಗೆ ಆಲೇಮನೆಯ ಮೆರುಗು ಪರಿಚಯಿಸಿ ತನ್ಮೂಲಕ ಮಲೆನಾಡಿನ ಈ ವಿಶಿಷ್ಟ ಆಚರಣೆಯನ್ನು ಜೀವಂತವಾಗಿರಿಸುವ ಸದುದ್ದೇಶದೊಂದಿಗೆ ಕಳೆದ ಆರೇಳು ವರ್ಷಗಳಿಂದ ತವರುಮನೆ ಹೋಂ ಸ್ಟೇ ‘ಆಲೇಮನೆ ಹಬ್ಬ’ ಎಂಬ ಹೆಸರಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಿ ಆಲೇಮನೆಯ ಕಬ್ಬಿನ ಹಾಲು, ಜೋನಿ ಬೆಲ್ಲದ ಸವಿಯನ್ನು ಉಣಬಡಿಸುತ್ತಿದೆ.
ಈ ಬಾರಿಯೂ ಆಲೇಮನೆ ಹಬ್ಬವು ಡಿಸೆಂಬರ್ 23ರಂದು ವಿದ್ಯುಕ್ತವಾಗಿ ಚಾಲನೆಯಾಗಿದ್ದು. ನಾಡಿನ ಹಿರಿಯ ನಾಟಕಾರರಲ್ಲೊಬ್ಬರಾದ ಎನ್.ಎಸ್. ಸೇತುರಾಮ್ ಅವರ ಉಪಸ್ಥಿತಿಯಲ್ಲಿ ಉಧ್ಘಾಟನೆಗೊಂಡಿತು. ಇದೇ ವೇಳೆ ಮಾತನಾಡಿದ ಅವರು ಉತ್ತರಕನ್ನಡಿಗರಿಗೆ ಇರುವ ಕಾಡಿನ ಪ್ರೀತಿಯನ್ನು ಶ್ಲಾಘಿಸಿದರು ಹಾಗು ಇಂದಿಗೂ ಈ ಭಾಗದಲ್ಲಿ ಕಾಡು ಜೀವಂತವಾಗಿದೆಯೆಂದರೆ ಅದಕ್ಕೆ ಇಲ್ಲಿನ ತೋಟಿಗರಿಗೆ ಇರುವ ಕಾಡಿನ ಕುರಿತಾಗಿನ ಕಾಳಜಿಯೇ ಕಾರಣ ಎಂಬುದನ್ನು ಉಲ್ಲೇಖಿಸಿ ಉತ್ತರ ಕನ್ನಡಿಗರಿಗೆ ಕಾಡಿನ ಜೊತೆಗಿರುವ ಅವಿನಾಭಾವ ಸಂಬಂಧವನ್ನೂ ಹಾಗೆಯೇ ಅದರೊಟ್ಟಿಗೇ ಬೆಳದುಬಂದಿರುವ ಇಲ್ಲಿನ ಬದುಕು-ಭಾವಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಿರಿಯ ಪರಿಸರ ತಜ್ಞ ಎನ್.ಆರ್. ಹೆಗಡೆ ಮಾನೀಗದ್ದೆ ಮಾತನಾಡಿ ತವರುಮನೆ ಹೋಂಸ್ಟೇಯನ್ನು ನಡೆಸಿಕೊಂಡು ಬರುತ್ತಿರುವ ಪಿಜಿ ಹೆಗಡೆ ಅವರ ಪರಿಸರ ಕಾಳಜಿಯನ್ನು ಶ್ಲಾಘಿಸಿದರು. ತವರು ಮನೆಯ ಪಿ.ಜಿ.ಹೆಗಡೆಯವರು ತಮ್ಮ ಹೋಂ ಸ್ಟೇಯ ಮೂಲಕ ಅನೇಕ ಪರಿಸರ ಸಂರಕ್ಷಣೆ, ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಜೇನುಹುಳಗಳ ಉಳಿವಿಗಾಗಿ ಅನೇಕ ಕಾರ್ಯಗಳನ್ನು ಮಾಡಿದ್ದಾರೆ. ಅಳಿವಿನಂಚಿನಲ್ಲಿರುವ ಮರಗಿಡಗಳನ್ನು ಪುನಃ ಬೆಳೆಸಿ, ಪಾರಿಸಾರಿಕ ಪುನಶ್ಚೇತನಕ್ಕೆ ಕಾರಣರಾಗುತ್ತಿದ್ದಾರೆ ಎಂದರು.
ಉಧ್ಘಾಟಕರಾಗಿ ಕಾರ್ಯಕ್ರಮದಲ್ಲಿ ಊರಿನ ಹಿರಿಯರಾದ ಅನಂತ ಮಹಾಲೇಶ್ವರ ಹೆಗಡೆ ಮೆಣಸಿಮನೆ ದಂಪತಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎನ್.ಎಸ್. ಹೆಗಡೆ ಕೋಟಿಕೊಪ್ಪ ವಹಿಸಿದ್ದರು. ಅತಿಥಿಗಳಾಗಿ ರಾಜಾರಾಮ ಹೆಗಡೆ ಸೊಣಗಿನ ಮನೆ ಉಪಸ್ಥಿತರಿದ್ದರು.
ಹಬ್ಬದ ರಂಗೇರಿಸಿದ ಮೂರೂರು ಗಾಯನ….!
ಆಲೇಮನೆ ಹಬ್ಬದ ಎರಡನೇ ದಿನ ಅಂದರೆ ಡಿ.24ರಂದು ಸಂಜೆ ನಾಡಿನ ಶ್ರೇಷ್ಠ ಗಾಯಕರಲ್ಲೊಬ್ಬರಾದ ಬಿಗ್ ಬಾಸ್ ಖ್ಯಾತಿಯ ರವಿ ಮೂರುರು ಇವರಿಂದ ‘ಶಾಲ್ಮಲೆಯ ತೀರದಲಿ…’ ಎಂಬ ವಿನೂತನ ಸಂಗೀತ ಕಾರ್ಯಕ್ರಮ ನಡೆಯಿತು. ತಮ್ಮ ಕಂಚಿನ ಕಂಠದಿಂದಲೇ ನಾಡಿನ ಜನರ ಮನೆಮಾತಾಗಿರುವ ಹೆಸರಾಂತ ಗಾಯಕ ರವಿ ಮೂರುರು ಗಾಯನಕ್ಕೆ ಖ್ಯಾತ ತಬಲಾ ಕಲಾವಿದ ಗಣೇಶ ಗುಂಟ್ಕಲ್ ಸಾಥ್ ನೀಡಿದರೆ ಇನ್ನೊಬ್ಬ ಹೆಸರಾಂತ ಕಲಾವಿದ ಮಧುಸೂದನ್ ಅಗ್ರಹಾರ ಹಾರ್ಮೋನಿಯಂ ಸಾಥ್ ನೀಡಿ ಆಲೇಮನೆಯ ಸಂಜೆಗೆ ಸಂಗೀತ ಸುಧೆಯ ರಸದೌತಣ ಉಣಬಡಿಸಿದರು. ಸಿ.ಅಶ್ವಥ್ ಅವರ ‘ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ’ ಹಾಡು ರವಿ ಮೂರೂರು ಕಂಠದಿಂದ ಹೊರಹೊಮ್ಮಿ ಕೇಳುಗರನ್ನು ರಂಜಿಸಿದರೆ ‘ಲೋಕದ ಕಣ್ಣಿಗೆ ರಾಧೆಯು ಕೂಡ..’ ಭಾವಗೀತೆಯು ಕೇಳುಗರನ್ನು ಮಂತ್ರಮುಗ್ಧರನ್ನಾಗಿಸಿತು. ಸುತ್ತಮುತ್ತಲ ಊರುಗಳಿಂದೊಂದೇ ಅಲ್ಲದ ದೂರದ ಬೆಂಗಳೂರಿನಿಂದಲೂ ಅನೇಕರು ಆಗಮಿಸಿ ಆಲೇಮನೆಯ ಸೊಬಗು ಸವಿದಿದ್ದು ವಿಶೇಷವಾಗಿತ್ತು.
ಇನ್ನೂ ಮೂರು ದಿನ ಇರಲಿದೆ ಆಲೇಮನೆ ಹಬ್ಬ
ಡಿಸೆಂಬರ್ 23 ರಂದು ಆರಂಭವಾದ ತವರುಮನೆ ಹೋಂ ಸ್ಟೇಯ ‘ಆಲೇಮನೆ ಹಬ್ಬ’ ವು ಡಿಸೆಂಬರ್ 28 ರವರೆಗೂ ಇರಲಿದೆ. ಆಲೇಮನೆ ಕಬ್ಬಿನ ಹಾಲಿಗಾಗಿ ಎದುರು ನೋಡುತ್ತಿರುವವರು ಮುಂದಿನ ಮೂರುದಿನಗಳ ಕಾಲ ಸಂಜೆ 5 ಗಂಟೆಗ ಆರಂಭವಾಗುವ ಆಲೇಮನೆ ಹಬ್ಬಕ್ಕೆ ಆಗಮಿಸಿ ಸಾದಾ ಕಬ್ಬಿನ ಹಾಲಿನ ಜೊತೆ ಕಿತ್ತಳೆ, ಶುಂಠಿ, ಲಿಂಬು ಹೀಗೆ ಮೂರು ಬಗೆಯ ಕಬ್ಬಿನ ಹಾಲು… ಮಂಡಕ್ಕಿ, ಮಿರ್ಚಿಯಂತಹ ಥರಹೇವಾರಿ ತಿನಿಸುಗಳು ಜೊತೆಗೆ ಜೋನಿಬೆಲ್ಲ, ತೊಡೇದೇವು ಮುಂತಾದ ಖಾದ್ಯಗಳನ್ನು ಸವಿಯಬಹುದಾಗಿದೆ ಹಾಗು ಮಲೆನಾಡಿನ ಉತ್ಪನ್ನಗಳ ಮಾರಾಟ ವ್ಯವಸ್ಥೆಯೂ ಇರಲಿದೆ.