ಶಿರಸಿ: ಸೋಲಾರ್, ಬಯೋಗ್ಯಾಸ ಮುಂತಾದ ಸುಸ್ಥಿರ ವಿಕೇಂದ್ರೀಕೃತ ಇಂಧನ ಅಭಿವೃದ್ಧಿ ಕಾರ್ಯಕ್ರಮಗಳನ್ನು ಗ್ರಾಮೀಣ ರೈತರಿಗೆ ತಲುಪಿಸಲು ಅವಶ್ಯ ಸೌಲಭ್ಯ ನೀಡಲು ಸಹಕಾರಿ ಸಂಘ-ಸಂಸ್ಥೆಗಳು ಪ್ರಮುಖ ಪಾತ್ರ ವಹಿಸಬೇಕು. ರಾಷ್ಟ್ರೀಯ ಸಹಕಾರಿ ನೀತಿ ಶಿಫಾರಸುಗಳಲ್ಲಿ ಸುಸ್ಥಿರ ಇಂಧನ ಅಭಿವೃದ್ಧಿ ವಿಷಯಕ್ಕೆ ಆದ್ಯತೆ ನೀಡಬೇಕು ಎಂದು ವೃಕ್ಷಲಕ್ಷ ತಂಡ ಮನವಿ ಮಾಡಿದೆ.
ಕೇಂದ್ರ ಪರಿಸರ-ಅರಣ್ಯ ಇಲಾಖೆಯ ಮಾಜಿ ಸಚಿವ ಹಾಗೂ ಪ್ರಸ್ತುತ ರಾಷ್ಟ್ರೀಯ ಸಹಕಾರೀ ನೀತಿ ನಿರೂಪಣಾ ಕಾರ್ಯಪಡೆ ಅಧ್ಯಕ್ಷ ಸುರೇಶ ಪ್ರಭು ಅವರನ್ನು ಡಿ.22ರಂದು ವೃಕ್ಷಲಕ್ಷ ತಂಡ ಭೇಟಿ ಮಾಡಿ ವಿಶೇಷ ಮನವಿ ಸಲ್ಲಿಸಿತು. ಮಲೆನಾಡಿನಲ್ಲಿ ಸುಸ್ಥಿರ ಇಂಧನ ಪ್ರಯೋಗಗಳು ಯಶಸ್ವಿ ಆಗಿವೆ ಎಂಬ ಅಂಶವನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ವಿಶ್ವ ಸಂಸ್ಥೆಯ ಜೀವವೈವಿಧ್ಯ ವೇದಿಕೆ, ಜಿ20 ಸಭೆಗಳಲ್ಲಿ ಭಾರತವನ್ನು ಹಲವು ಬಾರಿ ಪ್ರತಿನಿಧಿಸಿರುವ ಸುರೇಶ ಪ್ರಭು ಗ್ರಾಮೀಣ ಇಂಧನ ಅಭಿವೃದ್ಧಿಗೆ ಸಹಕಾರೀ ಕ್ಷೇತ್ರ ಸಂಪರ್ಕಿಸುವ ಶಿಫಾರಸನ್ನು ಶ್ಲಾಘಿಸಿದರು. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಪಾರಿಸಾರಿಕ ಸಂಪನ್ಮೂಲ ರಕ್ಷಣೆ ವಿಷಯಕ್ಕೂ ಸಹಕಾರ ಕ್ಷೇತ್ರ ಮಹತ್ವ ನೀಡಬೇಕು ಎಂದು ಸುರೇಶ ಪ್ರಭು ಅಭಿಪ್ರಾಯಪಟ್ಟರು.
ಇದಕ್ಕೂ ಮೊದಲು ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ “ಬಿಸಗೊಂಡ ಕಾಳಿ ಕಣಿವೆಯಲ್ಲಿ ಭಾರಿ ಗಣಿಗಾರಿಕೆ ನಿಲ್ಲಿಸಲು ಸಹಾಯ ಮಾಡಿದ್ದಕ್ಕೆ ಮಾಜಿ ಅರಣ್ಯ ಸಚಿವ ಸುರೇಶ ಪ್ರಭು ಅವರಿಗೆ ಧನ್ಯವಾದ ಹೇಳಿದರು.1998 ರಲ್ಲೇ ಶಿರಸಿ ತಾಲೂಕಿನ ಜೀವವೈವಿಧ್ಯ ದಾಖಲಾತಿ ವರದಿಯನ್ನು ಸೋಂದಾದಲ್ಲಿ ಪ್ರಭು ಅವರು ಬಿಡುಗಡೆ ಮಾಡಿದ್ದನ್ನು ಅಶಿಸರ ನೆನಪಿಸಿದರು.
ಕೇಂದ್ರ ಅರಣ್ಯ ಸಚಿವರಾಗಿದ್ದಾಗ ಪಶ್ಚಿಮ ಘಟ್ಟದ ಅರಣ್ಯ ನಾಶದ ಸಮೀಕ್ಷೆ ಮಾಡಿದ್ದೇನೆ. ಪೂಜ್ಯ ಸೋಂದಾ ಸ್ವರ್ಣವಲ್ಲೀ ಸ್ವಾಮೀಜಿ ಅವರನ್ನು ಭೇಟಿ ಮಾಡಿದ್ದೆ. ಇನ್ನೊಮ್ಮೆ ಶಿರಸಿ ಪ್ರದೇಶಕ್ಕೆ ಬಂದು ನಿಮ್ಮೆಲ್ಲರ ಜೊತೆ ಚರ್ಚಿಸುವ ಉದ್ದೇಶ ಹೊಂದಿದ್ದೇನೆ ಎಂದು ಇಂಗಿತ ವ್ಯಕ್ತಪಡಿಸಿದರು.
ಈ ಭೇಟಿ ಸಂದರ್ಭದಲ್ಲಿ ಡಾ. ಕೇಶವ ಹೆಚ್. ಕೊರ್ಸೆ, ಅರ್ಬನ ಬ್ಯಾಂಕ ಅಧ್ಯಕ್ಷ ಜಯದೇವ ನಿಲೇಕಣಿ, ದೀಪಕ ಹೆಗಡೆ, ಆರತಿ ಶೆಟ್ಟರ್ ಮುಂತಾದವರಿದ್ದರು.