ದಾಂಡೇಲಿ: ತಾಲ್ಲೂಕಿನ ಸಿಂಗರಗಾವ್ ಗ್ರಾ.ಪಂ ವ್ಯಾಪ್ತಿಯ ಉಸೋಡಾ ಎಂಬಲ್ಲಿ ಸುತ್ತಲು ಆವರಿಸಿರುವ ದಟ್ಟ ಕಾಡಿನ ಮಧ್ಯೆ ಇರುವ ವೃದ್ಧ ದಂಪತಿಗಳ ಪುಟ್ಟ ಮನೆಯ ಮೇಲೆ ಕಳೆದ ಐದು ತಿಂಗಳ ಹಿಂದೆ ಮರವೊಂದು ಬಿದ್ದು, ಮನೆಗೆ ಸಂಪೂರ್ಣ ಹಾನಿಯಾಗಿ, ಸರಕಾರದ ಪರಿಹಾರಕ್ಕಾಗಿ ಜಾತಕಪಕ್ಷಿಯಂತೆ ಕಾಯುತ್ತಿರುವ 75 ವರ್ಷ ದಾಟಿದ ರುಕ್ಮಿಣಿ ಸಟ್ಟು ಡುರೆ ಮತ್ತು ಅವರ ಪತಿ ಸಟ್ಟು ಡುರೆ ಎಂಬ ವೃದ್ಧ ದಂಪತಿಗಳ ಕರುಣಾಜನಕ ವರದಿಯಿದು.
ಅವರು ಅತೀ ಬಡವರು. ಬದುಕಿಗಾಗಿ ಮುಂಭಾಗದಲ್ಲಿ ಅಲ್ಪ ಕೃಷಿಯನ್ನೆ ನಂಬಿ, ಅಲ್ಪ ಸ್ವಲ್ಪ ಕೃಷಿಯ ಜೊತೆ ಬದುಕು ಕಟ್ಟಿ ಕೊಂಡವರು. ಮಗಳನ್ನು ಮದುವೆ ಮಾಡಿ ಕೊಟ್ಟಿದ್ದಾರೆ. ಗಂಡು ಮಕ್ಕಳಿಬ್ಬರು ಗೌಂಡಿ ಕೆಲಸ ಮಾಡುವುದಕ್ಕಾಗಿ ತನ್ನ ಮಡದಿ ಮಕ್ಕಳ ಜೊತೆ ದೂರದಲ್ಲಿದ್ದು, ಇವರು ಹಳ್ಳಿಯಲ್ಲಿ ಸ್ವಾಭಿಮಾನದ ಜೀವನ ನಡೆಸುತ್ತಾ ಬಂದಿದ್ದಾರೆ.
ಆದದ್ದೇನು..? ಜುಲೈ 26 ರಂದು ಸುರಿದ ಭೀಕರ ಗಾಳಿ ಮಳೆಗೆ ಮನೆಯ ಮೇಲೆ ಮರವೊಂದು ಬಿದ್ದು, ಮನೆಗೆ ಬಹಳಷ್ಟು ಹಾನಿಯಾಗಿದೆ. ಅದೃಷ್ಟವಶಾತ್ ವೃದ್ಧ ದಂಪತಿಗಳಿಗೆ ಯಾವುದೇ ಅಪಾಯ ಆಗದೇ ಇದ್ದರೂ ಮನೆ ಜಖಂಗೊಂಡಿದೆ. ಮನೆಯ ಮೇಲ್ಛಾವಣಿ ಸಂಪೂರ್ಣ ಮುರಿದು ಬಿದ್ದಿದ್ದು. ಮಳೆ ನೀರು ಸೋರದಂತೆ ಪ್ಲಾಸ್ಟಿಕ್ ಹೊದಿಕೆಯನ್ನು ಹಾಸುಕೊಂಡಿದ್ದಾರೆ. ಆದರೆ ಮನೆಯ ಮೇಲೆ ಬಿದ್ದಿರುವ ಮರವನ್ನು ಮಾತ್ರ ಇನ್ನೂ ತೆರವುಗೊಳಿಸಿಲ್ಲ. ಮನೆಯ ಮೇಲೆ ಮರ ಬಿದ್ದ ಹಿನ್ನಲೆಯಲ್ಲಿ ಮೊದಲೆ ಮಣ್ಣಿನ ಗೋಡೆಯಾಗಿರುವುದರಿಂದ ಗೋಡೆ ಬಿರುಕು ಬಿಟ್ಟಿದೆ. ಮರ ಬಿದ್ದಾಗಿನಿಂದ ವಿದ್ಯುತ್ ಮೀಟರ್ ಬೋರ್ಡ್ ಕೆಟ್ಟು ಹೋಗಿದ್ದು, ಆ ದಿನದಿಂದ ಈವರೆಗೆ ವಿದ್ಯುತ್ ಪೂರೈಕೆಯಾಗದೇ ಚಿಮಿಣಿ ದೀಪದಲ್ಲೆ ದಿನ ಕಳೆಯಬೇಕಾದ ಅನಿವಾರ್ಯ ಪರಿಸ್ಥಿತಿ ಈ ವೃದ್ಧ ದಂಪತಿಗಳದ್ದಾಗಿದೆ.
ಪರಿಹಾರಕ್ಕಾಗಿ ಸಿಂಗರಗಾವ್ ಗ್ರಾಮ ಪಂಚಾಯಿತಿಗೆ ಹಾಗೂ ತಾಲೂಕಾಡಳಿತಕ್ಕೆ ಮನವಿಯನ್ನು ಮಾಡಿದ್ದರು. ಮನವಿಗೆ ಅನುಗುಣವಾಗಿ ಪರಿಶೀಲನೆಗೆ ಅಧಿಕಾರಿಗಳು ಬಂದಿದ್ದ ಸಮಯದಲ್ಲಿ ಸಟ್ಟು ಡುರೆ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಮನೆಯಲ್ಲಿ ಯಾರು ಇಲ್ಲದಿರುವುದನ್ನು ಮನಗಂಡು, ಈ ಮನೆಯಲ್ಲಿ ಯಾರು ವಾಸವಿರುವುದಿಲ್ಲ ಎಂದು ವರದಿ ಮಾಡಿಕೊಂಡು ಹೋಗಿರುವುದರಿಂದ ನಮಗಿನ್ನೂ ಪರಿಹಾರ ಬಂದಿಲ್ಲ ಎಂಬ ವಾದ ರುಕ್ಮಿಣಿ ಸಟ್ಟು ಡುರೆಯವರಾದ್ದಾಗಿದೆ.
ಒಂದು ಕಡೆ ಮನೆಗೆ ಬಿದ್ದಿರುವ ಮರವನ್ನು ಇನ್ನೂ ತೆರವುಗೊಳಿಸಲಾಗಿಲ್ಲ, ಮರ ಬಿದ್ದು ಹಾನಿಯಾಗಿರುವ ಮೇಲ್ಚಾವಣಿಯನ್ನು ದುರಸ್ತಿ ಮಾಡಲಾಗಿಲ್ಲ, ವಿದ್ಯುತ್ ಮೀಟರ್ ಬೋರ್ಡಿಗೆ ಹಾನಿಯಾಗಿರುವುದರಿಂದ ವಿದ್ಯುತ್ ಪೂರೈಕೆಯಾಗದೆ ಕತ್ತಲಲ್ಲೆ ದಿನದೂಡಬೇಕಾದ ಪರಿಸ್ಥಿತಿಯಲ್ಲಿ ಈ ವೃದ್ಧ ದಂಪತಿಗಳ ಕುಟುಂಬವಿದೆ.
ಆದ್ದರಿಂದ ಸಂಬಂಧಪಟ್ಟ ಗ್ರಾಮ ಪಂಚಾಯಿತಿಯವರು ಮತ್ತು ತಾಲೂಕಾಡಳಿತ ಈ ವೃದ್ಧ ದಂಪತಿಗಳ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವುದರ ಜೊತೆಗೆ, ಗ್ರಾಮ ಪಂಚಾಯತಿ ವತಿಯಿಂದ ವಿಶೇಷ ಮುತುವರ್ಜಿಯನ್ನು ವಹಿಸಿ ಆಶ್ರಯ ಮನೆ ನೀಡುವ ನಿಟ್ಟಿನಲ್ಲಿ ಮುಂದಾಗಬೇಕಾಗಿದೆ.