ಕಾರವಾರ: ಗ್ರಾಮೀಣ ಭಾಗದ ಅಭಿವೃದ್ದಿ ಹಾಗೂ ದುಡಿಯುವ ಕೈಗಳಿಗೆ ಕೆಲಸ ನೀಡುವ ನಿಟ್ಟಿನಲ್ಲಿ ಕೂಲಿಕಾರರಿಗೆ ಮಾಹಿತಿ ನೀಡಲು ಸಾರ್ವಜನಿಕ ಸ್ಥಳಗಳಲ್ಲಿ “ರೋಜಗಾರ್ ದಿನ” ಆಚರಿಸಲಾಯಿತು.
ಕಾರವಾರ ತಾಲೂಕಿನ ಘಾಡಸಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮ ಪಂಚಾಯತ್ ಹಾಗೂ ಅನುಷ್ಠಾನಕ್ಕೆ ಇಲಾಖೆಗಳಲ್ಲಿ ಪಡೆಯಬಹುದಾದ ವೈಯಕ್ತಿಕ ಹಾಗೂ ಸಾಮುದಾಯಿಕ ಕಾಮಗಾರಿಗಳು, ದಿನಗೂಲಿ ಇತ್ಯಾದಿ ಕೆಲಸದ ಕುರಿತಾದ ಮಾಹಿತಿ ನೀಡುವುದರೊಂದಿಗೆ ಕೆಲಸಕ್ಕೆ ಬರುವಂತೆ ಕರೆ ನೀಡಲಾಯಿತು.
ಉದ್ಯೋಗ ಖಾತ್ರಿ ಯೋಜನೆಯಡಿ ಯಾವುದೇ ಬೇಡಿಕೆಗಳಿದ್ದರೂ ಗ್ರಾಮ ಪಂಚಾಯತಿಗೆ ಅರ್ಜಿ ನೀಡಿ ಕಾಮಗಾರಿ ಪಡೆಯಬಹುದು. ಪ್ರತಿಯೊಂದು ಮನೆಯಲ್ಲೂ ಬಚ್ಚಲು ಗುಂಡಿ ಕಡ್ಡಾಯವಾಗಿ ನಿರ್ಮಿಸಿಕೊಂಡು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಜೊತೆಗೆ ಪೌಷ್ಟಿಕ ಕೈತೋಟ ನಿರ್ಮಿಸಿಕೊಂಡು ಸೂಕ್ತ ಸಮಯದಲ್ಲಿ ಯೋಜನೆಯ ಸದುಪಯೋಗಪಡಿಸಿಕೊಳ್ಳಬೇಕು ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರೀತಿ ಹೊಸಮನಿ ಹೇಳಿದರು.
ಗ್ರಾಮದಲ್ಲಿ ನರೇಗಾದಡಿ ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಕೆರೆ, ಕಾಲುವೆ, ಇಂಗುಗುಂಡಿ, ಟ್ರೆಂಚ್ ಹಾಗೂ ಕೃಷಿ, ತೋಟಗಾರಿಕೆ, ಅರಣ್ಯ ಇಲಾಖೆಯಡಿಯೂ ಸಾಮುದಾಯಿಕ ಕಾಮಗಾರಿ ಕೈಗೊಂಡು ಅಭಿವೃದ್ಧಿ ಜೊತೆಗೆ ಕೆಲಸ ಪಡೆಯಬಹುದಾಗಿದೆ. ಅಲ್ಲದೆ ವೈಯಕ್ತಿಕವಾಗಿ ಕಾಮಗಾರಿಗಳನ್ನು ಪಡೆದು ಸ್ವಾವಲಂಬನೆಯ ಜೀವನಕ್ಕೆ ಮುಂದಾಗಬಹುದಾಗಿದೆ ಎಂದು ತಾಲೂಕು ಐಇಸಿ ಸಂಯೋಜಕಿ ಪೂರ್ಣಿಮಾ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಶರತ್ ನಾಯ್ಕ, ಕಾರ್ಯದರ್ಶಿ ಸುರೇಶ್ ಉಮ್ಮನ್ನನವರ, ಎಸ್‌ಡಿಎ, ಹಾಗೂ ಸಿಬ್ಬಂದಿ ಇದ್ದರು.