ಕುಮಟಾ: ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಕುಮಟಾ ಮತ್ತು ವಿಧಾತ್ರಿ ಅಕಾಡೆಮಿ ಮಂಗಳೂರು ಇವರ ಸಹಭಾಗಿತ್ವದ ಬಿ.ಕೆ.ಭಂಡಾರಕರ್ ಸರಸ್ವತಿ ಪದವಿಪೂರ್ವ ಕಾಲೇಜಿನ ಜಾನಪದ ಸೊಗಡಿನ ಸಾಂಸ್ಕೃತಿಕ ಕಲಾ ವೈಭವದ ಕಾರ್ಯಕ್ರಮವು ಡಿ.11 ಜರುಗಿತ್ತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಪದ್ಮಶ್ರೀ ಪುರಸ್ಕೃತರಾದ ಶ್ರೀಮತಿ ಸುಕ್ರಿ ಗೌಡ ಮತ್ತು ತುಳಸಿ ಗೌಡ ಜಂಟಿಯಾಗಿ ನೆರವೇರಿಸಬೇಕಾಗಿತ್ತು.
ಅನಾರೋಗ್ಯದ ಕಾರಣ ಸುಕ್ರಿ ಬೊಮ್ಮ ಗೌಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿರದ ಕಾರಣ ಕಾಲೇಜಿನ ವತಿಯಿಂದ ಸುಕ್ರಿಯವರ ಊರಾದ ಅಂಕೋಲಾದ ಬಡಗೇರಿಗೆ ತೆರಳಿದ ವಿಧಾತ್ರಿ ಅಕಾಡೆಮಿಯ ಸಹ ಸಂಸ್ಥಾಪಕ ಗುರುರಾಜ ಶೆಟ್ಟಿ, ಪ್ರಾಚಾರ್ಯ ಕಿರಣ ಭಟ್ಟ ಮತ್ತು ಸಾಂಸ್ಕೃತಿಕ ವಿಭಾಗದ ಸಂಯೋಜಕರಾದ ಉಪನ್ಯಾಸಕ ಗುರುರಾಜ ಶೆಟ್ಟಿ ಹಾಗೂ ಕನ್ನಡ ಉಪನ್ಯಾಸಕ ಚಿದಾನಂದ ಭಂಡಾರಿ ಅವರೊಂದಿಗೆ ಪದ್ಮಶ್ರೀ ಸುಕ್ರಿ ಗೌಡರನ್ನು ಕಂಡು ಅವರ ಅರೋಗ್ಯದ ಕುಶಲೋಪರಿಯನ್ನು ವಿಚಾರಿಸಿ ಕಲಾಂಜಲಿ ಕಾರ್ಯಕ್ರಮದ ಸವಿ ನೆನಪಲ್ಲಿ ಅವರನ್ನು ಅತ್ಯಂತ ಗೌರವಪೂರ್ವಕವಾಗಿ ಸನ್ಮಾನಿಸಿದರು. ಸನ್ಮಾನವನ್ನು ಪ್ರೀತಿಯಿಂದ ಸ್ವೀಕರಿಸಿದ ಸುಕ್ರಿಯವರು ಸಂಸ್ಥೆಗೆ ಶುಭ ಹಾರೈಸಿ ಆರೋಗ್ಯ ಸುಧಾರಿಸಿದ ಬಳಿಕ ಖುದ್ದಾಗಿ ಭೇಟಿ ನೀಡುವ ಅಪೇಕ್ಷೆಯನ್ನು ವ್ಯಕ್ತಪಡಿಸಿದರು.