ಯಲ್ಲಾಪುರ: ‘ಯಲ್ಲಾಪುರದಷ್ಟು ಸುಂದರ ನಗರ, ಯಾವುದೇ ಜಾತಿ, ಧರ್ಮ ಭೇದ ಭಾವ ಇಲ್ಲದ ರೋಲ್ ಮಾಡೆಲ್ ಯಲ್ಲಾಪುರ. ಬೆರಳುಗಳನ್ನು ಕೂಡಿಸಿದಾಗ ಮುಷ್ಠಿಯಾಗಿ ಬಾಗಿಸಲು ಹೇಗೆ ಅಸಾಧ್ಯವೋ ಹಾಗೆಯೇ ಯಲ್ಲಾಪುರವೂ ಸಂಘಟಿತವಾಗಿದೆ. ಎಲ್ಲರನ್ನೂ ಸಂಘಟಿಸುವ ಅಪರೂಪದ ಕಾರ್ಯಕ್ರಮ ಇದಾಗಿದೆ. ಗೆದ್ದವರು ಮಾತ್ರ ಅಭಿನಂದನೆಗೆ ಅರ್ಹರಲ್ಲ, ಸೋತವರೂ ಅಭಿನಂದನೆಗೆ ಅರ್ಹರೇ ಎಂದು ಪಂಚಾಯಿತಿ ರಾಜ್ ವಿಕೇಂದ್ರಿಕರಣ ಅಭಿವೃದ್ಧಿ ಸಮಿತಿಯ ರಾಜ್ಯ ಉಪಾಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.
ಪಟ್ಟಣದ ಕಾಳಮ್ಮನಗರದ ತಾಲೂಕು ಕ್ರೀಡಾಂಗಣದಲ್ಲಿ ಯಲ್ಲಾಪುರ ಕ್ರಿಕೆಟ್ ಅಸೊಶಿಯೇಷನ್ ವಿಶಾಲ ಶಾನಭಾಗ್ ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡ ಯಲ್ಲಾಪುರ ಪ್ರೀಮಿಯಂ ಲೀಗ್ (ವೈಪಿಎಲ್) ಪಂದ್ಯಾವಳಿಯಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿದರು.
ಪಂದ್ಯಾವಳಿ ಉದ್ಘಾಟಿಸಿದ ಪದ್ಮನಾಭ ಶಾನಭಾಗ್ ಮಾತನಾಡಿ, ‘ಯಲ್ಲಾಪುರದಲ್ಲಿ ಕ್ರಿಕೆಟ್ ಮೈದಾನ ಇಲ್ಲದ ಸಂದರ್ಭದಿಂದ ಹಿಡಿದು ಇಲ್ಲಿನವರೆಗಿನ ಕ್ರಿಕೆಟ್ ಇತಿಹಾಸವನ್ನು ಮೆಲಕು ಹಾಕಿ, ಯಲ್ಲಾಪುರ ತಾಲೂಕಿನ ಕ್ರಿಕೆಟ್ ತಂಡವನ್ನು ರಚಿಸಬೇಕೆಂದು ಸಲಹೆ ನೀಡಿದರು. ಹಿರಿಯ ಕ್ರಿಕೆಟ್ ಆಟಗಾರ ನಾಗರಾಜ ಮದ್ಗುಣ ಮಾತನಾಡಿ, ಸಂಘಟನೆ ಬಹಳ ಕಷ್ಠ. ನ್ಯೂನತೆಗಳಾಗಿದ್ದರೆ ಅಧ್ಯಕ್ಷನ ಕಡೆ ಬೆರಳು ಮಾಡುತ್ತಾರೆ. ಯಶಸ್ವಿಯಾದರೆ ನೇತೃತ್ವ ವಹಿಸಲು, ರಾಜಕಾರಣ ಮಾಡಲು ಹಲವರು ಸಿದ್ಧರಾಗುತ್ತಾರೆ. ಈ ಸಂಘಟನೆ ಇನ್ನೂ ಹೆಚ್ಚು ಸಂಘಟಿತವಾಗಿ ಉಳಿಯಲಿ ಎಂದರು.
ಕಳೆದ 35 ವರ್ಷಗಳಿಂದ ಮಕ್ಕಳಿಗೆ ಕ್ರೀಡಾ ತರಬೇತಿ ನೀಡುತ್ತಿರುವ ಹಿರಿಯ ಕ್ರೀಡಾ ತರಬೇತುದಾರ ಪದ್ಮನಾಭ ಶಾನಭಾಗ್ ಹಾಗೂ ಕ್ರೀಡಾ ಪ್ರೋತ್ಸಾಹಕ ಸ್ಟಾರ್ ಸ್ಪೋರ್ಟ್ಸ ಕ್ಲಬ್ ಅಧ್ಯಕ್ಷ ದತ್ತಾ ರೇವಣಕರ್ ಅವರನ್ನು ಸನ್ಮಾನಿಸಲಾಯಿತು.
ಪ್ರಾಯೋಜಕ ವಿಶಾಲ್ ಶಾನಭಾಗ ಮಾತನಾಡಿ, ಇಲ್ಲಿ ಸಿಗುತ್ತಿರುವ ಇಷ್ಟು ಸಂತಸದ ಕ್ಷಣ ನನ್ನ ವ್ಯವಹಾರದಲ್ಲೂ ಸಿಕ್ಕಿರಲಿಲ್ಲ. ಜಿಲ್ಲಾ ಮಟ್ಟದ ಪಂದ್ಯ ಮಾಡಿ ನನ್ನ ಬೆಂಬಲ ಸದಾ ಇದೆ ಎಂದರು. ಥೈಲೆಂಡಿನ ಅನಿವಾಸಿ ಭಾರತೀಯ ಉದ್ಯಮಿ ರಮೇಶ ಶಾನಭಾಗ್ ಮಾತನಾಡಿ ‘ಯಲ್ಲಾಪುರ ಪ್ರವಾಸೋದ್ಯಮದಿಂದ ಹೆಸರಾಗಿದೆ. ಇನ್ನೊಂದು ವೈಪಿಎಲ್ ಆಗಲಿ ರಾಷ್ಟ್ರಮಟ್ಟದ ಕ್ರೀಡಾಪಟು ನೀಡಲಿ. ಜಾತಿ ಧರ್ಮ ಬದಿಗಿಟ್ಟು ಕ್ರಿಕೆಟ್ ಗೆಲ್ಲಿಸಿ ಎಂದರು.
ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯೆ ನರ್ಮದಾ ನಾಯ್ಕ, ಯುವಜನ ಸೇವಾ ಕ್ರೀಡಾಧಿಕಾರಿ ನಾರಾಯಣ ನಾಯಕ, ಹಿರಿಯ ಕ್ರಿಕೆಟ್ ಆಟಗಾರರಾದ ಕೃಷ್ಣ ನಾಯರ್, ನಂದನ ಬಾಳಗಿ, ಯೋಗೇಶ ಶಾನಭಾಗ ಇದ್ದರು. ಯಲ್ಲಾಪುರ ಕ್ರಿಕೆಟ್ ಅಸೋಶಿಯೇಷನ್ ಅಧ್ಯಕ್ಷ ಸತೀಶ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಮಾರುತಿ ನಾಯ್ಕ ನಿರೂಪಿಸಿದರು. 8 ತಂಡಗಳ ಲೀಗ್ ಮಾದರಿಯಲ್ಲಿ ಪಂದ್ಯಾವಳಿ ನಡೆಯಲಿದ್ದು, ಜನವರಿ 4 ರಂದು ಅಂತಿಮ ಪಂದ್ಯ ನಡೆಯಲಿದೆ. ಪಂದ್ಯಾವಳಿಯನ್ನು 4 ಕ್ಯಾಮರಾಗಳ ಮೂಲಕ ಯೂ ಟ್ಯೂಬ್ ನಲ್ಲಿ ನೇರ ಪ್ರಸಾರ ಮಾಡಲಾಗುವುದು.