ಹೊನ್ನಾವರ; ತಾಲೂಕಿನ ಮುಗ್ವಾ ಸುಬ್ರಹ್ಮಣ್ಯ ದೇವಾಲಯದಲ್ಲಿ ಡಿ. 18 ರಂದು ಚಂಪಾಷಷ್ಠಿ ಉತ್ಸವ ಜರುಗಲಿದೆ ಎಂದು ಆಡಳಿತ ಮಂಡಳಿಯ ಅಧ್ಯಕ್ಷ ಎಸ್.ಆರ್.ಹೆಗಡೆ ಮಾಹಿತಿ ನೀಡಿದರು.
ದೇವಸ್ಥಾನದಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿ ಚಂಪಾಷಷ್ಠಿಯು ಶ್ರೀ ಸುಬ್ರಹ್ಮಣ್ಯ ದೇವರ ವಿಶೇಷ ಉತ್ಸವವಾಗಿದೆ. ನಾಡಿನ ನಾನಾ ಭಾಗಗಳಿಂದ ಇಲ್ಲಿಗೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಕಳೆದ ವರ್ಷ ಚಂಪಾಷಷ್ಠಿ ಉತ್ಸವದಲ್ಲಿ ಹತ್ತು ಸಾವಿರ ಜನರು ಪ್ರಸಾದ ಭೋಜನ ಸ್ವೀಕರಿಸಿದ್ದರು. ಈ ವರ್ಷವೂ ಅಷ್ಟೇ ಪ್ರಮಾಣದಲ್ಲಿ ಪ್ರಸಾದ ಭೋಜನದ ಸಿದ್ದತೆ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ದೇವಸ್ಥಾನದ ನಾಗಬನದಲ್ಲಿ ಬೆಳಿಗ್ಗೆ 8; 30ರಿಂದ ಅಭಿಷೇಕ, ಅರ್ಚನೆ, ಆರತಿ ಪ್ರಾರಂಭವಾಗಿ 1:30 ಮಹಾಪೂಜೆ ನಡೆಯಲಿದೆ. ಪ್ರಧಾನ ದೇವರಾದ ಶ್ರೀ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ಬೆಳಿಗ್ಗೆ 7ಗಂಟೆಯಿಂದ ಅರ್ಚನೆ, ಆರತಿ, ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗುತ್ತದೆ. 8;30ರಿಂದ ಅಭಿಷೇಕಗಳ ಸೇವೆಗಳು ಆರಂಭವಾಗಿ ಮಧ್ಯಾಹ್ನ 12 ಗಂಟೆಯ ವರೆಗೆ ನಡೆಯುತ್ತವೆ. ನಂತರ ಕಲಾಭಿಷೇಕ, ಪರಿವಾರ ದೇವತೆಗಳಿಗೆ ಪೂಜೆ, ಬಲಿ, ಮಹಾಮಂಗಳಾರತಿ ನೆರವೇರಲಿದ್ದು ಸಂಜೆ 4ರಿಂದ ರಾತ್ರಿ 10:39 ಗಂಟೆಯವರೆಗೆ ಪ್ರಸಾದ ಭೋಜನ ನಡೆಯುತ್ತದೆ. ರಾತ್ರಿ 8:30 ಗಂಟೆಗೆ ಮಹಾಮಂಗಳಾರತಿ ನಡೆಯಲಿದ್ದು 8;30ರ ನಂತರ ಯಾವುದೇ ಅಭಿಷೇಕ ಅಥವಾ ಸೇವೆಗಳು ಇರುವುದಿಲ್ಲ ಎಂದು ತಿಳಿಸಿದರು.
ಹುಲಿಯಪ್ಪನಕಟ್ಟೆಯಿಂದ ದೇವಾಲಯದ ಆವರಣದವರೆಗೂ ಸರತಿ ಸಾಲಿನಲ್ಲಿ ಆಗಮಿಸಬೇಕಿದ್ದು, ಶಾಮಿಯಾನ ವ್ಯವಸ್ಥೆ ಮಾಡಲಾಗಿದೆ. ಕುಡಿಯುವ ನೀರು ಹಾಗ ಪಾನಕ ಭಕ್ತರಿಗೆ ವಿತರಿಸಲಾಗುವುದು. ವಿವಿಧ ಧಾರ್ಮಿಕ ಸೇವೆ ಸಲ್ಲಿಸಲು ಸೇವಾ ಕೌಂಟರ್ ತೆರೆಯಲಾಗುವುದು. ಮುಂಜಾನೆಯಿಂದ ರಾತ್ರಿಯವರೆಗೂ ನಿರಂತರವಾಗಿ ದೇವರ ದರ್ಶನ ಹಾಗೂ ಸೇವೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ಇದೇ ವೇಳೆ ಕಾರ್ಯದರ್ಶಿ ಎನ್.ಎಂ. ಭಟ್, ನಾರಾಯಣ ಹೆಗಡೆ , ಲಕ್ಷ್ಮಿನಾರಾಯಣ ಹೆಗಡೆ ಕಣ್ಣಿ, ಎಸ್.ಆರ್. ಭಟ್ ಉಪಸ್ಥಿತರಿದ್ದರು.