ಜಿಲ್ಲೆಯ ಶಾಸ್ತ್ರೀಯ ಸಂಗೀತ ವಲಯದಲ್ಲಿ ಹರ್ಷದ ಹೊನಲು
ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ ಅಪ್ರತಿಮ ಸಾಧನೆ ಮಾಡುವ ಮೂಲಕ ಜಿಲ್ಲೆ, ರಾಜ್ಯ, ದೇಶ, ವಿದೇಶಗಳಲ್ಲಿ ಖ್ಯಾತರಾಗಿರುವ ಗಾಯಕ ಪಂಡಿತ್ ಗಣಪತಿ ಭಟ್ ಹಾಸಣಗಿಯವರಿಗೆ ಮಧ್ಯಪ್ರದೇಶ ಸರ್ಕಾರ ನೀಡುವ ಅತ್ಯುನ್ನತ ಗೌರವ “ತಾನಸೇನ” ಪ್ರಶಸ್ತಿ ಗೌರವ ಬಂದಿದೆ. ವಿಷಯ ತಿಳಿದ ಜಿಲ್ಲೆಯ ಅನೇಕ ಹಿರಿಯ, ಕಿರಿಯ ಹರ್ಷವನ್ನು ವ್ಯಕ್ತಪಡಿಸಿದ್ದಾರೆ.
ತಮ್ಮ ಸುಮಧುರ ಕಂಠದ ಮೂಲಕವೇ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ ಹಾಸಣಗಿ, ಇದೇ ಡಿಸೆಂಬರ್ 24 ರಂದು ಗ್ವಾಲಿಯರ್‌ನಲ್ಲಿ ಅಲ್ಲಿಯ ಆಡಳಿತ ಸರ್ಕಾರ ಪಂಡಿತ್ ಹಾಸಣಗಿಯವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಿದೆ. ಇದರಿಂದ ಉತ್ತರ ಕನ್ನಡ ಜಿಲ್ಲೆಯ ಕೀರ್ತಿ ಕೂಡಾ ಹೆಚ್ಚಾಗಿದೆ ಎಂಬುದು ಸಂಗೀತ ದಿಗ್ಗಜರ, ಹಾಸಣಗಿಯವರ ಶಿಷ್ಯಕೋಟಿಯ ಮನದಾಳದ ಮಾತು. ಪಂಡಿತ್ ಗಣಪತಿ ಭಟ್ ರವರು ಮೂಲತಃ ಯಲ್ಲಾಪುರ ತಾಲೂಕಿನ ಹಾಸಣಗಿ ನಿವಾಸಿಗಳಾದ, ಯಕ್ಷಗಾನದ ಭಾಗವತರಾಗಿದ್ದ ವೆಂಕಟ್ರಮಣ ಮತ್ತು ಸಂಪ್ರದಾಯಬದ್ಧ ಹಾಡುಗಳಿಗೆ ಹೆಸರಾಗಿದ್ದ ಮಹಾದೇವಿ ದಂಪತಿಯ ಪುತ್ರರು. ತಂದೆ-ತಾಯಿಯವರ ಹಾಡಿಗೆ ಪ್ರಭಾವಿತರಾಗಿ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು. ಅದರೊಂದಿಗೆ ಧಾರವಾಡದ ಕರ್ನಾಟಕ ಕಾಲೇಜಿನ ಸಂಗೀತ ವಿಭಾಗದಲ್ಲಿ ಸಿತಾರ ವಾದನದ ಆಕರ್ಷಣೆ ಕೂಡ ಇವರದ್ದಾಗಿತ್ತು.
ಸಂಗೀತದ ಮೇರು ಕಲಾವಿದ ಪಂಡಿತ್ ಬಸವರಾಜ ರಾಜಗುರುಗಳಲ್ಲಿ 24 ವರ್ಷಗಳ ಕಾಲ ಸಂಗೀತಾಭ್ಯಾಸ ಮಾಡುತ್ತ ಜನಿಸಿದ ಕುಟುಂಬದ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಆ ನಂತರದಲ್ಲಿ ಇನ್ನೊಬ್ಬ ಸಂಗೀತ ದಿಗ್ಗಜ ಪಂ. ಸಿ. ಆರ್. ವ್ಯಾಸರಲ್ಲಿ ಸಂಗೀತ ಅಭ್ಯಾಸ ಮಾಡುತ್ತ, ರಾಜ್ಯ, ಹೊರ ರಾಜ್ಯ, ದೇಶ, ವಿದೇಶಗಳ ಪ್ರಖ್ಯಾತ ವೇದಿಕೆಯಲ್ಲಿ ಯಶಸ್ವಿ ಕಾರ್ಯಕ್ರಮ ನೀಡುತ್ತಿದ್ದಾರೆ. ಪಂ. ಭಟ್ ತಾವು ಕಲಿತ ವಿದ್ಯೆಯನ್ನು ತಮ್ಮ ಹುಟ್ಟೂರು ಹಾಸಣಗಿಯಲ್ಲಿ ಸಂಗೀತ ಗುರುಕುಲ ಸಂಸ್ಥಾಪಿಸಿ, ಗುರು-ಶಿಷ್ಯ ಪರಂಪರೆ ಅಡಿಯಲ್ಲಿ ಸಂಗೀತ ಮಾರ್ಗದರ್ಶನ ಮಾಡುತ್ತ, ಅಸಂಖ್ಯಾತ ಯುವ ಸಂಗೀತಗಾರರನ್ನು ಈ ಸಮಾಜಕ್ಕೆ ನೀಡಿದ್ದು ಶ್ಲಾಘನೀಯ.
ಆಕಾಶವಾಣಿ ಮತ್ತು ದೂರದರ್ಶನಗಳ ‘ಎ ಗ್ರೇಡ್’ ಕಲಾವಿದರಾಗಿ, ಡಾ| ಗಂಗೂಬಾಯಿ ಹಾನಗಲ್ ನ್ಯಾಷನಲ್ ಟ್ರಸ್ಟ್, ಹುಬ್ಬಳ್ಳಿ ಇದರ ಸಂಗೀತ ಗುರುಕುಲದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯತತ್ಪರರಾಗಿದ್ದಾರೆ. ಇದರೊಂದಿಗೆ ಸಂಗೀತ ನೃತ್ಯ ಅಕಾಡೆಮಿ ಸದಸ್ಯರಾಗಿ, ಹಂಪಿ ವಿಶ್ವವಿದ್ಯಾನಿಲಯದಲ್ಲಿ ಸಂಶೋಧನೆಗಳಿಗೆ ನಿರ್ದೇಶಕರಾಗಿ, ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯ ಸಮಿತಿಯಲ್ಲಿ, ಹಾಗೂ ವಿವಿಧ ವಿಶ್ವವಿದ್ಯಾಲಯಗಳ ಸಂಗೀತ ಪರೀಕ್ಷಾ ಸಮಿತಿ ಸದಸ್ಯರಾಗಿ, ಸಂಗೀತ ಕ್ಷೇತ್ರಕ್ಕೆ ಅಮೂಲ್ಯ ಸೇವೆ ಸಲ್ಲಿಸಿರುವುದು ಇಲ್ಲಿ ಉಲ್ಲೇಖನೀಯವಾಗಿದೆ.
ಸುದೀರ್ಘವಾಗಿ 45 ವರ್ಷಗಳ ಕಾಲ ಸಂಗೀತ ಸುಧೆಯನ್ನು ಹರಿಸುತ್ತಿರುವ ಪಂ. ಗಣಪತಿ ಭಟ್ ಈವರೆಗೆ ಐದು ಸಾವಿರಕ್ಕೂ ಮಿಕ್ಕಿ ತಮ್ಮ ಸಂಗೀತ ಕಚೇರಿಯನ್ನು ನಡೆಸಿಕೊಟ್ಟಿದ್ದಾರೆ. ಸಂಗೀತದ ಹೆಸರಾಂತ ಸ್ಥಳ ಪೂನಾದ ಸವಾಯಿ ಗಂಧರ್ವದಲ್ಲಿ ಐದು ಬಾರಿ ಸಂಗೀತ ಕಚೇರಿ ನಡೆಸಿಕೊಟ್ಟಿದ್ದು ಹೆಮ್ಮೆಯ ಸಂಗತಿ. ಇದರೊಂದಿಗೆ ತಮ್ಮ ಗುರುಗಳ ಹೆಸರಿನಲ್ಲಿ ಹುಟ್ಟೂರು ಮಂಚಿಕೇರಿಯಲ್ಲಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಗಾಯಕರನ್ನು ಕರೆಸಿ ಸರಿಸುಮಾರು 16 ವರ್ಷಗಳ ಕಾಲ ಕಾರ್ಯಕ್ರಮ ಸಂಘಟಿಸಿದ್ದು ಜಿಲ್ಲೆಯ ಜನ ಎಂದೂ ಮರೆಯಲಾರರು.
ಹಾಸಣಗಿಯವರ ಸಂಗೀತ ಸಾಧನೆಗೆ ನೂರಾರು ಗೌರವ ಪುರಸ್ಕಾರಗಳು ಬಂದಿದ್ದು, ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ಪಂ. ಭೀಮಸೇನ ಜೋಷಿಯವರು ಆರ್ಯ ಪ್ರಸಾರಕ ಮಂಡಳಿಯ ವತ್ಸಲಾಬಾಯಿ ಭೀಮಸೇನ ಜೋಷಿ ಪ್ರಶಸ್ತಿ, ಜೊತೆಜೊತೆಗೆ ಸ್ವಾತಂತ್ರೋತ್ಸವ ಸಂದರ್ಭದಲ್ಲಿ ನ್ಯೂಜಿಲೆಂಡಿನ ಅಂದಿನ ಅಧ್ಯಕ್ಷರಿಂದ ದೆಹಲಿಯಲ್ಲಿ ಸನ್ಮಾನ, ಹೀಗೆ ಹತ್ತಾರು ಸಂಘ ಸಂಸ್ಥೆ, ಸಂಗೀತ ಶಾಲೆಗಳ ಪುರಸ್ಕಾರ ಇವೆಲ್ಲವೂ ಲೆಕ್ಕವಿಲ್ಲದಷ್ಟಿದೆ.
ಘರಾಣಾಕ್ಕೆಂದೇ ಹೆಸರಾದ ಗ್ವಾಲಿಯರ್‌ನಲ್ಲಿ ಪಂ. ಹಾಸಣಗಿ ಈಗಾಗಲೇ ಎರಡು ಬಾರಿ ಸಂಗೀತ ಕಚೇರಿ ನಡೆಸಿಕೊಟ್ಟು, ಅಲ್ಲಿಯ ಜನರ ಮನೆಮಾತಾಗಿದ್ದಾರೆ. ಪ್ರಸ್ತುತ ಡಿಸೆಂಬರ್ 24 ರಂದು ಪ್ರಶಸ್ತಿ ಪ್ರದಾನ ನಂತರದಲ್ಲಿ ಮೂರನೇ ಬಾರಿಗೆ ತಮ್ಮ ಗಾನ ಪ್ರಸ್ತುತಪಡಿಸುತ್ತಿರುವುದು ಅವರ ಸಾಧನೆಯ ಮತ್ತೊಂದು ಮೈಲುಗಲ್ಲು ಎನ್ನಬಹುದು.
ಜಿಲ್ಲೆಯ ಹೆಮ್ಮೆಯ ಗಾಯಕನಿಗೆ ಮಧ್ಯಪ್ರದೇಶ ಗ್ವಾಲಿಯರ್‌ನಲ್ಲಿ ಉನ್ನತ ಗೌರವ ತಾನ್‌ಸೇನ್ ದೊರಕುತ್ತಿರುವುದು ಸಾಧನೆಯ ವ್ಯಕ್ತಿಯ ಪರಿಶ್ರಮಕ್ಕೆ ಗೌರವ ಪುರಸ್ಕಾರಗಳು ತಾನಾಗಿಯೇ ಒಲಿದುಬರುತ್ತದೆ ಎಂಬುದನ್ನು ಸಾಕ್ಷೀಕರಿಸಬಹುದಾಗಿದೆ.
ಗಿರಿಧರ ಕಬ್ನಳ್ಳಿ