ದಾಂಡೇಲಿ: ನಗರದ ಸೋಮಾನಿ ವೃತ್ತದ ಹತ್ತಿರದಲ್ಲಿರುವ ಶ್ರೀಸಂತ ಜ್ಞಾನೇಶ್ವರ ಮಂದಿರದಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮವು ಸಂಭ್ರಮ, ಸಡಗರ ಹಾಗೂ ಶ್ರದ್ಧಾ ಭಕ್ತಿಯಿಂದ ಸೋಮವಾರ ಸಂಪನ್ನಗೊಂಡಿತು.
ಭಾನುವಾರದಿಂದ ಆರಂಭಗೊಂಡಿದ್ದ ಜಾತ್ರಾ ಮಹೋತ್ಸವವು ಸೋಮವಾರ ಸಂಜೆ ಸಂಪನ್ನಗೊಂಡಿತು. ಬೆಳಗ್ಗೆಯಿಂದಲೇ ವಿವಿಧ ಪೂಜಾರಾಧನೆಗಳು ಆರಂಭಗೊಂಡಿತ್ತು. ಪಲ್ಲಕ್ಕಿ ಉತ್ಸವವು ಶ್ರೀ ಸ್ವಾಮಿಯ ಸನ್ನಿಧಿಯಿಂದ ಆರಂಭಗೊಂಡು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಕೊನೆಯಲ್ಲಿ ಶ್ರೀ ಸ್ವಾಮಿ ಸನ್ನಿಧಿಯಲ್ಲಿ ಸಂಪನ್ನಗೊಂಡಿತು. ಇದರ ಜೊತೆ ಜೊತೆಯಲಿ ಭಜನಾ ಸಂಕೀರ್ತನೆ ಕಾರ್ಯಕ್ರಮ ಜರುಗಿತು.
ಮಧ್ಯಾಹ್ನ ಮಹಾಪೂಜೆಯಾದ ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ, ಶ್ರೀ ಸ್ವಾಮಿಯ ಪ್ರಸಾದ ಸ್ವೀಕರಿಸಿದರು. ಭಾನುವಾರ ಶಾಸಕ ಆರ್.ವಿ.ದೇಶಪಾಂಡೆ ಸನ್ನಿಧಿಗೆ ಆಗಮಿಸಿ ಶ್ರೀ ಸ್ವಾಮಿಯ ದರ್ಶನ ಪಡೆದು ಕಾರ್ಯಕ್ರಮದ ಯಶಸ್ಸಿಗೆ ಶುಭ ಕೋರಿದರು
ಜಾತ್ರಾ ಮಹೋತ್ಸವದ ಯಶಸ್ವಿಗೆ ಶ್ರೀಸಂತ ಜ್ಞಾನೇಶ್ವರ ಮಂದಿರದ ಆಡಳಿತ ಸಮಿತಿಯ ಪ್ರಮುಖರು, ಪದಾಧಿಕಾರಿಗಳು, ಸದಸ್ಯರು ಹಾಗೂ ಭಕ್ತಾಭಿಮಾನಿಗಳು ಶ್ರಮಿಸಿದ್ದರು.