ಯಲ್ಲಾಪುರ: ತಾಲೂಕಿನ ಉಮ್ಮಚಗಿಯ ಕಾಗಾರಕೊಡ್ಲಿನ ಸುಮೇರು ಜ್ಯೋತಿರ್ವನದಲ್ಲಿ ನಕ್ಷತ್ರ ಮಂಡಲ ದೀಪೋತ್ಸವ ಎಂಬ ವಿಶಿಷ್ಟ ಕಾರ್ಯಕ್ರಮ ಗಮನ ಸೆಳೆಯಿತು.
ಸುಮೇರು ಜ್ಯೋತಿರ್ವಿಜ್ಞಾನ ಸಂಪ್ರತಿಷ್ಠಾನಂ ಹಾಗೂ ಸಾತ್ವಿಕ ಫೌಂಡೇಷನ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಈ ವಿಶೇಷ ಕಾರ್ಯಕ್ರಮವನ್ನು ವನಜಾಕ್ಷಿ ಶಿವರಾಮ ಹೆಬ್ಬಾರ ಹಣತೆ ಬೆಳಗುವ ಮೂಲಕ ಉದ್ಘಾಟಿಸಿದರು.
ಜ್ಯೋತಿಷಾಚಾರ್ಯ ವಿ. ನಾಗೇಂದ್ರ ಭಟ್ಟ ಹಿತ್ಲಳ್ಳಿ ಉಪಸ್ಥಿತರಿದ್ದು, ಕಾರ್ತೀಕ ಮಾಸದಲ್ಲಿ ಇಂತಹ ವಿಶಿಷ್ಟ ದೀಪೋತ್ಸವ ಮಹತ್ವಪೂರ್ಣ ಎನಿಸುತ್ತದೆ ಎಂದರು.
ಆಕಾಶದಲ್ಲಿಯ ಅಶ್ವಿನಿಯೇ ಮೊದಲಾದ 27 ನಕ್ಷತ್ರಗಳು, ಧ್ರುವ ನಕ್ಷತ್ರ, ಸಪ್ತರ್ಷಿ ಮಂಡಲ, ನವಗ್ರಹಗಳ ಆಕೃತಿಯಲ್ಲಿ ಹಣತೆಗಳನ್ನು ಜೋಡಿಸಿ, ದೀಪ ಬೆಳಗಲಾಯಿತು. ಭೂಮಧ್ಯ ರೇಖೆ, ಕರ್ಕ ಸಂಕ್ರಾಂತಿ, ಮಕರ ಸಂಕ್ರಾಂತಿ ವೃತ್ತಗಳು ಹಾಗೂ ರೇಖಾಗಣಿತದ ಅನೇಕ ಪ್ರಮೇಯಗಳನ್ನು ಶ್ರೀಚಕ್ರ ರೂಪದಲ್ಲಿ ದೀಪಗಳ ಮೂಲಕ ಪ್ರಾಯೋಗಿಕವಾಗಿ ತೋರಿಸಲಾಯಿತು. ಭಾರತೀಯ ಜ್ಯೋತಿಷ ಶಾಸ್ತ್ರದ ಆಕಾಶ ಕಲ್ಪನೆಯ ವೈಜ್ಞಾನಿಕ ನೋಟ ಸಾಕ್ಷಾತ್ಕಾರಗೊಂಡಿತು.
ಡಾ.ಕೆ.ಸಿ.ನಾಗೇಶ ಭಟ್ಟ, ಡಾ.ನಿವೇದಿತಾ ಭಟ್ಟ ಅವರ ಮಾರ್ಗದರ್ಶನದಲ್ಲಿ ನಡೆದ ಈ ಅಪರೂಪದ ಕಾರ್ಯಕ್ರಮಕ್ಕೆ 500 ಕ್ಕೂ ಹೆಚ್ಚು ಜನರು ಸಾಕ್ಷಿಯಾದರು.