ಗೋಕರ್ಣ: ಹಾಲಕ್ಕಿ ಸಮಾಜದವರು ಪ್ರತಿಯೊಂದು ಕ್ಷೇತ್ರದಲ್ಲಿಯೂ ಮುಂದೆ ಬರುತ್ತಿದ್ದು, ಇನ್ನು ಹೆಚ್ಚಿನ ಪ್ರಗತಿ ಸಾಧಿಸಬೇಕು ಎಂದು ಹಾಲಕ್ಕಿ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ, ನಾಟಿ ವೈದ್ಯ ಹನುಮಂತ ಗೌಡ ಹೇಳಿದರು.
ಗೋಕರ್ಣದ ಬಿಜ್ಜುರಿನ ಶ್ರೀ ಕಳಕಳೇಶ್ವರ ದೇಗುಲದ ದೀಪೋತ್ಸವ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ, ಸನ್ಮಾನ ಸ್ವೀಕರಿಸಿ, ಅವರು ಮಾತನಾಡಿದರು. ಸಮಾಜದ ವಿವಿಧ ಮಜಲುಗಳಲ್ಲಿ ಸೇವೆ ಸಲ್ಲಿಸುವವರನ್ನು ಗುರುತಿಸಿ ಗೌರವಿಸುತ್ತಿರುವುದು ಹೆಮ್ಮೆ ತಂದಿದೆ ಎಂದರು.
ಹೃದಯ ರೋಗ ತಜ್ಞ ಡಾ ಕೀರ್ತಿ ನಾಯ್ಕ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಧಾರ್ಮಿಕ ಕೈಂಕರ್ಯಗಳ ಜೊತೆಯಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ನೀಡುತ್ತಿರುವರನ್ನು ಗುರುತಿಸಿ, ಸನ್ಮಾನಿಸುತ್ತಿರುವುದು ಅಭಿನಂದನಾರ್ಹ ಎಂದರು.
ಮುಖ್ಯ ಅತಿಥಿಗಳಾಗಿ ಗೋಕರ್ಣ ಬಿ.ಸಿ.ಪಿ.ಯು ಕಾಲೇಜಿನ ಪ್ರಾಚಾರ್ಯ ಎಸ್.ಸಿ.ನಾಯ್ಕ, ಶ್ರೀ ಭದ್ರಕಾಳಿ ಪ್ರೌಢಶಾಲೆ ಮುಖ್ಯೋಪಾಧ್ಯಾಪಕ ಸಿ.ಜಿ.ನಾಯ್ಕ, ಲಯನ್ಸ್ ಕ್ಲಬ್ ಅಧ್ಯಕ್ಷ ಎನ್.ಎಸ್.ಲಮಾಣಿ, ಪತ್ರಕರ್ತ ಗಜಾನನ ನಾಯಕ, ಗ್ರಾ.ಪಂ ಸದಸ್ಯ ಸುಜಯ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಯೋಜಕ ವಿನಾಯಕ ಕಾಳೆ ಸನ್ಮಾನಿಸಿದರು.ನಂತರ ನವತರುಣ ನಾಟ್ಯವೃಂದ ಗೋಕರ್ಣ ಇವರಿಂದ ತವರಿನಲ್ಲಿ ನೆಲೆ ಇಲ್ಲಾ ತಂಗಿ ಸಾಮಾಜಿಕ ನಾಟಕ ಪ್ರದರ್ಶನವು ಸಾವಿರಾರು ಜನರಿಗೆ ಮನರಂಜನೆ ನೀಡಿತು.
ಕಳಕಳೇಶ್ವರ ಮಂದಿರದಲ್ಲಿ ಮುಂಜಾನೆ ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿತು. ಸಂಜೆ ದೀಪೋತ್ಸವ, ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಮಂದಿರವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದು, ಇದರ ಜೊತೆ ಹಾಲಕ್ಕಿ ಒಕ್ಕಲಿಗ ಸಮಾಜದವರ ಗುಮಟೆ ಪಾಂಗ್ ಭಕ್ತರನ್ನು ಆಕರ್ಷಿಸಿತು.
ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸಿ, ದೇವರ ದರ್ಶನ ಪಡೆದರು.