ಅಂಕೋಲಾ: ನಾಡಿನ ಪ್ರಸಿದ್ಧ ಕವಿ, ಸಂಗೀತಗಾರ, ತತ್ವಜ್ಞಾನಿ, ಸಮಾಜ ಸುಧಾರಕ ಮತ್ತು ಸಂಯೋಜಕ ಶ್ರೀಕೃಷ್ಣನ ಪರಮ ಭಕ್ತ ಕನಕದಾಸರ ಜಯಂತಿಯನ್ನು ಇಲ್ಲಿನ ತಹಸೀಲ್ದಾರ ಕಾರ್ಯಾಲಯದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ತಾಲೂಕಾ ದಂಡಾಧಿಕಾರಿ ಬಿ. ಅನಂತ ಶಂಕರ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಪೂಜೆ ಸಲ್ಲಿಸಿದರು. ನಂತರ ಮಾತನಾಡಿ, ಕನಕದಾಸರ ಕೀರ್ತನೆಗಳು ಕರ್ನಾಟಕ ಸಂಗೀತಕ್ಕೆ ಅಪಾರ ಕೊಡುಗೆ ನೀಡಿವೆ. ಅವರು ಹರಿದಾಸ ಸಾಹಿತ್ಯ ಚಳವಳಿಯ ಭಾಗವಾಗಿದ್ದರು. ಕನಕದಾಸರು ತಮ್ಮ ಸಾಹಿತ್ಯ ಕೃತಿಗಳನ್ನು ಸಾಮಾಜಿಕ ಜಾಗೃತಿ ಹರಡಲು ಬಳಸಿಕೊಂಡ ಪ್ರಮುಖ ಸಾಹಿತ್ಯ ಮತ್ತು ಸಾಂಸ್ಕೃತಿಕ ವ್ಯಕ್ತಿ. ಅವರು ವರ್ಗ ವ್ಯತ್ಯಾಸಗಳು ಮತ್ತು ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿದರು ಎಂದರು.
ಅವರ ಕೀರ್ತನೆಗಳು ಸಾಮಾನ್ಯವಾಗಿ ಸಾಮಾಜಿಕ ವಿಷಯಗಳೊಂದಿಗೆ ವ್ಯವಹರಿಸುವ ವಿಡಂಬನೆಗಳಾಗಿವೆ. ಅಲ್ಲಿ ಅವರು ಎಲ್ಲ ಸಾಮಾಜಿಕ ವರ್ಗಗಳಲ್ಲಿ ಸಮಾನತೆಯನ್ನು ಪ್ರತಿಪಾದಿಸಿದರು. ಅವರು ತಮ್ಮ ಕೀರ್ತನೆಗಳನ್ನು ಸ್ಥಳೀಯ ಭಾಷೆಯಲ್ಲಿ ರಚಿಸಿದರು ಮತ್ತು ಅವುಗಳನ್ನು ಸಾರ್ವಜನಿಕರಿಗೆ ಹೆಚ್ಚು ಪ್ರವೇಶಿಸುವಂತೆ ಮಾಡಿದರು ಎಂದರು.
ಈ ಸಂದರ್ಭದಲ್ಲಿ ಗ್ರೇಡ್-2 ತಹಸೀಲ್ದಾರ ಬಿ.ಜಿ.ಕುಲಕರ್ಣಿ, ಉಪ ತಹಸೀಲ್ದಾರ ಗಿರೀಶ ಜಾಂಬಾವಳಿಕರ, ಎಸ್.ಟಿ.ಹರಿಕಂತ್ರ, ಕಾರ್ಯಾಲಯದ ಕಂದಾಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.