ಭಟ್ಕಳ: 2024ರಲ್ಲಿ ಪ್ಯಾರೀಸ್ನಲ್ಲಿ ನಡೆಯುವ 12ನೇ ಅಂತರಾಷ್ಟ್ರೀಯ ಪ್ಯಾರಾ ಓಲಂಪಿಕ್ಸ್ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಭಾಗವಹಿಸಲು ಅರ್ಹತೆ ಪಡೆಯುವ ನಿಟ್ಟಿನಲ್ಲಿ ಜಪಾನ್ ಟೋಕಿಯೋದಲ್ಲಿ ನವೆಂಬರ್
7 ರಿಂದ 12ರವರೆಗೆ ಸಂಘಟಿಸಲಾದ ಅಂತರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ (ಎಮ್ಡಿ ಎಸ್ಎಲ್ 3- ಎಸ್ಎಲ್4) ತಾಲೂಕಿನ ಶಿರಾಲಿ ಚಿತ್ರಾಪುರದ ನಿವಾಸಿ ಮಂಜುನಾಥ ನಾಯ್ಕ ಕಂಚಿನ ಪದಕ ಪಡೆದ ಹಿನ್ನೆಲೆ ಭಟ್ಕಳ ಸಂಶುದ್ದೀನ್ ಸರ್ಕಲನಲ್ಲಿ ಅದ್ಧೂರಿ ಸ್ವಾಗತ ಮಾಡಿದರು.
ಭಟ್ಕಳಕ್ಕೆ ಆಗಮಿಸಿದ ಅವರನ್ನು ಸ್ಪಂದನ ಚಾರಿಟೇಬಲ್ ಟ್ರಸ್ಟ್, ಕ್ರೀಯಾಶೀಲ ಗೆಳೆಯರ ಬಳಗ, ಭಟ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಭಟ್ಕಳ ನಾಮಧಾರಿ ಸಮಾಜದ ಸಹಯೋಗದಲ್ಲಿ ಇಲ್ಲಿನ ಸಂಶುದ್ದೀನ್ ಸರ್ಕಲ್ನಲ್ಲಿ ಬರಮಾಡಿಕೊಂಡರು. ನಂತರ ಅವರನ್ನು ಇಲ್ಲಿನ ಆಸರಕೇರಿ ಶ್ರೀ ವೆಂಕಟ್ರಮಣ ದೇವಸ್ಥಾನದ ಸಭಾಭವನಕ್ಕೆ ಮೆರವಣಿಗೆಯಲ್ಲಿ ಕರೆದೊಯ್ದು, ಸನ್ಮಾನಿಸಿ, ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಭಟ್ಕಳ ನಿಚ್ಚಲಮಕ್ಕಿ ಶ್ರೀ ವೆಂಕಟ್ರಮಣ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಅರುಣ ನಾಯ್ಕ, ಭವಾನಿಶಂಕರ ನಾಯ್ಕ, ಭಟ್ಕಳ ಕಸಾಪ ಅಧ್ಯಕ್ಷ ಗಂಗಾಧರ ನಾಯ್ಕ, ಶ್ರೀಧರ ಶೇಟ್, ಸ್ಪಂದನ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷ ರಾಘವೇಂದ್ರ ನಾಯ್ಕ, ಮಾಜಿ ಸೈನಿಕರ ಸಂಘದ ಶ್ರೀಕಾಂತ ನಾಯ್ಕ, ಕ್ರೀಯಾಶೀಲ ಗೆಳೆಯ ಬಳಗದ ಅಧ್ಯಕ್ಷ ದೀಪಕ ನಾಯ್ಕ, ಮನಮೋಹನ ನಾಯ್ಕ, ಅಣ್ಣಪ್ಪ ನಾಯ್ಕ, ಶ್ರೀನಿವಾಸ ನಾಯ್ಕ, ಪಾಂಡು ನಾಯ್ಕ, ಈಶ್ವರ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.