ಶಿರಸಿ: ಮಲೆನಾಡು ಭಾಗದಲ್ಲಿ ಹೊಸತನದ ಉತ್ಪನ್ನಗಳಿಗೆ ಗ್ರಾಹಕರು ಮತ್ತು ಹೂಡಿಕೆದಾರರಿಗೆ ನೇರ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ನ.30 ರಿಂದ ಡಿ.3 ರವರೆಗೆ ಮಲೆನಾಡು ಮೆಗಾ ಉತ್ಸವ ಶಿರಸಿ ನಗರದ ವಿಕಾಸ ಆಶ್ರಮ ಮೈದಾನದಲ್ಲಿ ನಡೆಯಲಿದೆ.
ಶಿರಸಿ ಜಿಲ್ಲಾ ಪತ್ರಿಕಾಭವನದಲ್ಲಿ ಗುರುವಾರ ಮಾಧ್ಯಮ ಗೋಷ್ಟಿ ನಡೆಸಿ ಮಾಹಿತಿ ನೀಡಿದ ಕಾರ್ಯಕ್ರಮ ಸಂಘಟಕ ಎಸ್.ಎಂ.ಹೆಗಡೆ, ಉದ್ಯಮಶೀಲತೆಯ ಕ್ಷೇತ್ರಕ್ಕೆ ಹೆಜ್ಜೆ ಹಾಕಿದವರಿಗೆ ಹೊಸತನದ ಅವಕಾಶವನ್ನು ಪೂರೈಸುವ ವೇದಿಕೆ ಇದಾಗಿದೆ. ಸ್ವ ಸಹಾಯದ ಸಂಘಗಳಲ್ಲಿ ಹಾಗೂ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಜನರು ಹೊಸ ಉತ್ಪನ್ನಗಳನ್ನು ತಯಾರು ಮಾಡುತ್ತಾರೆ. ಆದರೆ ಅವರಿಗೆ ಸರಿಯಾದ ವೇದಿಕೆ ಸಿಗುವುದಿಲ್ಲ. ಆ ನಿಟ್ಟಿನಲ್ಲಿ ಇದೊಂದು ಉತ್ತಮ ಸಂಪರ್ಕ ಕಾರ್ಯಕ್ರಮ ಆಗಲಿದೆ. ಮೇಳದಲ್ಲಿ ವಿವಿಧ ಉತ್ಪನ್ನಗಳ 100 ಮಳಿಗೆಗಳು ಕಾರ್ಯನಿರ್ವಹಿಸಲಿವೆ ಈಗಾಗಲೇ 80 ಮಳಿಗೆಗಳು ಬುಕ್ ಆಗಿವೆ ಎಂದು ಹೇಳಿದರು.
ಸಂಘಟಕ ಮಂಜುನಾಥ ಪೂಜಾರಿ ಮಾತನಾಡಿ, ನ.30 ರ ಸಂಜೆ 4.30 ಗಂಟೆಗೆ ವಿಧಾನಸಭೆ ಮಾಜಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕಾರ್ಯಕ್ರಮ ಉದ್ಘಾಟಿಸುವರು. ಸಮಾರೋಪ ಸಮಾರಂಭದಲ್ಲಿ ಶಾಸಕ ಭೀಮಣ್ಣ ನಾಯ್ಕ ಭಾಗಿಯಾಗಲಿದ್ದಾರೆ ಎಂದರು. ಮೆಗಾ ಉತ್ಸವಕ್ಕೆ ಉಚಿತ ಪ್ರವೇಶ ಇದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಈ ಮೂಲಕ ವಿನಂತಿಸಿದರು.