ಶಿರಸಿ: ಭರತನಾಟ್ಯ ಕಲಾವಿದೆ ಪೂಜಾ ಲೋಕೇಶ್ ಹೆಗಡೆ ಶಿರಸಿ ಇವಳಿಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು 73ನೇ ಘಟಿಕೋತ್ಸವದಲ್ಲಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೊಟ್ ಪದವಿ ಪ್ರಧಾನ ಮಾಡಿದ್ದು, ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಇಂಡೋಫ್ರೆಂಚ್ ಸೆಂಟರ್ ನವದೆಹಲಿ ಇದರ ನಿರ್ದೇಶಕ ಪ್ರೊ.ನಿತಿನ್ ಶೇಟ್, ವಿವಿ ಕುಲಪತಿ, ಪ್ರೊ.ಕೆ.ವಿ. ಗುಡಸಿ ಇದ್ದರು.
ಪೂಜಾ ಲೋಕೇಶ್ ಭರತನಾಟ್ಯದಲ್ಲಿ ವಿದ್ವತ್ ಮುಗಿಸಿದ್ದು, ಪ್ರಸ್ತುತ ಸೀಮಾ ಭಾಗ್ವತ್, ಲಾವಣ್ಯ ಅನಂತರಲ್ಲಿ ಕಲಿಕೆ ಮುಂದುವರಿಸಿದ್ದಾರೆ. ಕರ್ನಾಟಕ ವಿವಿಯಲ್ಲಿ ರಸಾಯನ ಶಾಸ್ತ್ರ ವಿಭಾಗದಲ್ಲಿ ಅಭ್ಯಾಸ ಮುಗಿಸಿದ್ದು, ಪ್ರೊ.ವಿ.ಕೆ.ರೇವಣಕರ್ ಮಾರ್ಗದರ್ಶನದಲ್ಲಿ ‘ಸಿಂಥೆಟಿಕ್ ಕ್ಯಾರಕ್ಟರೈಜೇಷನ್ ಆ್ಯಂಡ್ ಆ್ಯಂಟಿ ಟ್ಯೂಬರ್ ಕ್ಯೂಲಕರ್ ಎಸ್ಸೆ ಆಪ್ ಟ್ರಾನ್ಸಿಷನ್ ಮೆಟಲ್ ಕಾಂಪ್ಲೆಕ್ಸಸ್’ ಎಂಬ ಸಂಶೋಧನಾ ಗ್ರಂಥ ಮಂಡಿಸಿದ್ದು,ಈ ಪ್ರಬಂಧಕ್ಕೆ ಪಿಎಚ್‌ಡಿ ನೀಡಲಾಗಿದೆ.
ಚಿಕ್ಕಂದಿನಿಂದಲೇ ಪ್ರತಿಭಾನ್ವಿತೆಯಾಗಿದ್ದ ಪೂಜಾ, ಕಾಲೇಜು ಹಂತದಲ್ಲೇ ಹಲವು ಪ್ರಶಸ್ತಿ-ಪುರಸ್ಕಾರಕ್ಕೆ ಪಾತ್ರರಾಗಿದ್ದರು. 2007 ಹಾನಗಲ್ ಮ್ಯೂಸಿಕ್ ಫೌಂಡೇಶನ್ ನಡೆಸಿದ ರಾಜ್ಯ ಮಟ್ಟದ ಶಾಸ್ತ್ರೀಯ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ನಾಟ್ಯ ಮಯೂರಿ ಪ್ರಶಸ್ತಿಗೆ ಭಾಜನರಾಗಿದ್ದರು. ಅದೇ ವರ್ಷ ರಾಜ್ಯಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕೀರ್ತಿ ಗಳಿಸಿದ್ದರು.
2008ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಲಾ ಪ್ರತಿಭೋತ್ಸವದಲ್ಲಿ ಪ್ರಥಮ, 2011ರಲ್ಲಿ ಅಂತರವಲಯ ಯುವ ಜನೋತ್ಸವ ಶಾಸ್ತ್ರೀಯ ನೃತ್ಯದಲ್ಲಿ ಪ್ರಥಮ, 2012ರಲ್ಲಿ ಡಿ.ಡಿ. ಚಂದನ ಅರ್ಪಿಸುವ ಮಧುರವೀ ಮಂಜುಳಗಾನದಲ್ಲಿ ನೃತ್ಯ ಸಂಯೋಜನೆಯೊಂದಿಗೆ ನೃತ್ಯ ಪ್ರದರ್ಶನ, ಇದರೊಂದಿಗೆ ಶಿರಸಿಯ ಕಲಾ,ವಿಜ್ಞಾನ ಮಹಾವಿದ್ಯಾಲಯ, ಲಯನ್ಸ್ ಕ್ಲಬ್, ನಟರಾಜ ನೃತ್ಯ ಶಾಲೆ, ಶ್ರೀ ಸಾಯಿ ಸಂಗೀತ ವಿದ್ಯಾಲಯ, ಹವ್ಯಕ ಸಾಂಸ್ಕೃತಿಕ ಸಂಸ್ಥೆ ಹೀಗೆ ಅನೇಕ ಸಂಸ್ಥೆಗಳು ಇವರನ್ನು ಗುರುತಿಸಿ ಗೌರವಿಸಿವೆ.
ರಾಜ್ಯಮಟ್ಟದ ಭರತನಾಟ್ಯ ಸ್ಪರ್ಧೆಗಳಲ್ಲೂ ತೀರ್ಪುಗಾರರಾಗಿ ಭಾಗವಹಿಸಿರುವ ಪೂಜಾ ಹೆಗಡೆ ಗೋವಾ, ಚೆನ್ನೈ, ಬೆಂಗಳೂರು, ಚಿಕ್ಕಮಗಳೂರು, ಹುಬ್ಬಳ್ಳಿ, ಧಾರವಾಡ ಸೇರಿದಂತೆ ಹಲವೆಡೆ ನೃತ್ಯ ಪ್ರತಿಭಾ ಪ್ರದರ್ಶನ ನೀಡಿದ್ದಾರೆ. ಇವರು ಆರ್ಕಿಟೆಕ್ಟ್ ನಿತೀಶ ಭಟ್ ಅವರ ಪತ್ನಿಯಾಗಿದ್ದು, ಶಿರಸಿ ಪ್ರಸಿದ್ದ ಅಡಿಕೆ ವರ್ತಕ ಕೆ.ಬಿ.ಲೋಕೇಶ ಹೆಗಡೆ ಹಾಗೂ ಜಯಲಕ್ಷ್ಮೀ ಹೆಗಡೆ ಅವರ ಪುತ್ರಿಯಾಗಿದ್ದಾರೆ.