ಭಟ್ಕಳ: ಉ.ಕ.ಜಿಲ್ಲಾ ಕಸಾಪ ಹಾಗೂ ಭಟ್ಕಳ ತಾಲೂಕಾ ಕಸಾಪ ಸಹಯೋಗದಲ್ಲಿ ಕನ್ನಡ ಕಾರ್ತಿಕ ಅನುದಿನ ಅನುಸ್ಪಂದನ ಕಾರ್ಯಕ್ರಮದ ಅಡಿಯಲ್ಲಿ ಆಯೋಜಿಸಿದ ಕನ್ನಡ ನಾಡು ನುಡಿ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮವು ಇಲ್ಲಿನ
ದಿ ನ್ಯೂ ಇಂಗ್ಲೀಷ ಪದವಿ ಪೂರ್ವ ಕಾಲೇಜಿನಲ್ಲಿ ಜರುಗಿತು.
ಕಾರ್ಯಕ್ರಮಮವನ್ನು ಸಾಹಿತಿ ಮಾನಾಸುತ ಶಂಭು ಹೆಗಡೆ ದೀಪ ಬೆಳಗಿ ಉದ್ಘಾಟಿಸಿದರು. ನಂತರ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು ಸಾಹಿತ್ಯ ಪರಿಷತ್ತು ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯ ಮೂಲಕ ನಾಡು ನುಡಿಯ ಅರಿವನ್ನು ಮೂಡಿಸಿಕೊಳ್ಳಲು ಅವಕಾಶ ಕಲ್ಪಿಸಿದೆ. ಕನ್ನಡ ಭಾಷೆಯ ಸಾಹಿತ್ಯ ಶ್ರೀಮಂತವಾಗಿದ್ದು ಅದನ್ನು ಅರಿಯಬೇಕು ಜೊತೆಗೆ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ದಿಸೆಯಲ್ಲಿ ಸಾಹಿತ್ಯ ಪರಿಷತ್ತು ಶಾಲಾ-ಕಾಲೇಜು ಹಂತದ ವಿದ್ಯಾರ್ಥಿಗಳೆಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಅವರಲ್ಲಿ ನಾಡು ನುಡಿಯ ಕುರಿತು ಅರಿಯಲು ವೇದಿಕೆ ಕಲ್ಪಿಸಿರುವುದು ಅಭಿನಂದನಾರ್ಹ ಕಾರ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ವೀರೇಂದ್ರ ಶಾನಭಾಗ ಮಾತನಾಡಿ ವಿದ್ಯಾರ್ಥಿಗಳು ಕನ್ನಡ ಭಾಷೆಯ ಆಸಕ್ತಿ ಮೂಡಿಸಿಕೊಂಡು ಇಂದಿನ ದಿನಮಾನದಲ್ಲಿ ಇಂಗ್ಲೀಷ ಭಾಷಾ ಕೌಶಲ್ಯ ಬೆಳೆಸಿಕೊಳ್ಳಬೇಕು.ಆದರೆ ಕನ್ನಡದ ಅಭಿಮಾನವನ್ನೂ ಉಳಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕಸಾಪ ಕಾರ್ಯಕಾರಿ ಸಮಿತಿ ಸದಸ್ಯ ಎಂ.ಪಿ.ಭಂಡಾರಿ ಮಾತನಾಡಿ ಜಿಲ್ಲಾ ಮತ್ತು ತಾಲೂಕಾ ಸಾಹಿತ್ಯ ಪರಿಷತ್ತು ರಾಜ್ಯೋತ್ಸವ ಮಾಸವನ್ನು ಕನ್ನಡಕಾರ್ತಿಕ ಅನುದಿನ ಅನುಸ್ಪಂದನ ಎಂಬ ಶಿರೋನಾಮೆಯೊಂದಿಗೆ ಜಿಲ್ಲೆಯಾದ್ಯಂತ ಕನ್ನಡದ ಹಬ್ಬವನ್ನು ಆಚರಿಸುತ್ತಿದೆ. ಈ ನೆಲೆಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಸಹಕಾರವನ್ನು ನೆನೆದರು. ನಂತರ ಕನ್ನಡ ನಾಡು ನುಡಿ ಪ್ರಬಂಧ ಸ್ಪರ್ಧೆಯಲ್ಲಿ ನಿಖಿತಾ ಶ್ರೀಧರ ಮೊಗೇರ ಪ್ರಥಮ, ಪ್ರಥಮೇಶ್ ರಾಜೇಶ ಬಲ್ಸೇಕರ ದ್ಚಿತೀಯ, ಕಾಂಚನಾ ಆರ್.ಬಂಡಿಕೇರಿ ತೃತೀಯ ಸಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಪುಸ್ತಕ ಬಹುಮಾನ ವಿತರಿಸಲಾಯಿತು. ಭಾಗವಹಿಸಿದ ಎಲ್ಲ ಸ್ಪರ್ಧಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಉಪನ್ಯಾಸಕ ನಾಗೇಂದ್ರ ಪೈ ನಿರ್ವಹಿಸಿದರೆ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ವಿಜೇತರಾದ ಹಾಗೂ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಅಭಿನಂದಿಸಿದ್ದಾರೆ.