ಕುಮಟಾ: ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜು ಗೋರೆ, ಕುಮಟಾ ಮತ್ತು ಸವಿ ಫೌಂಡೇಶನ್(ರಿ) ಮೂಡಬಿದ್ರೆ (ದ.ಕ) ಇವರ ಸಂಯುಕ್ತ ಆಶ್ರಯದಲ್ಲಿ ನ.18ರಂದು ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಜೆ.ಇ.ಇ, ಸಿ.ಇ.ಟಿ. ಪರೀಕ್ಷಾ ತಯಾರಿ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮವು ಗೋರೆ ಕಾಲೇಜಿನಲ್ಲಿ ಯಶಸ್ವಿಯಾಗಿ ನಡೆಯಿತು.
ಉಡುಪಿಯ ಶ್ರೀ ಮಾಧ್ವ ವಾದಿರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಂಡ್ ಮ್ಯಾನೇಜ್ಮೆಂಟ್ನ ಪ್ಲೇಸ್ಮೆಂಟ್ ಆಫೀಸರ್ ಮತ್ತು ಸ್ಟುಡೆಂಟ್ ವೆಲ್ಫೇರ್ ಆಫೀಸರ್ ಆಗಿರುವ ಪ್ರೊ. ಡಾ.ಸಿ.ಕೆ.ಮಂಜುನಾಥ ಅವರು ಜೆ.ಇ.ಇ ಮತ್ತು ಸಿ.ಇ.ಟಿ. ಪರೀಕ್ಷೆಗೆ ಯಾವ ರೀತಿ ಸಿದ್ಧತೆ ಮಾಡಿಕೊಳ್ಳಬೇಕು. ಜೀವನದಲ್ಲಿ ಯಶಸ್ವಿಯಾಗಲು ಡಾ. ಅಬ್ದುಲ್ ಕಲಾಮ್ರ ಯಶಸ್ಸಿನ ಪಂಚಸೂತ್ರವನ್ನು ಅಳವಡಿಸಿಕೊಳ್ಳುವಂತೆ ಮಾರ್ಗದರ್ಶನ ನೀಡಿದರು.
ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾಗಿರುವ ಡಾ. ಸಂದೀಪ ಜೆ. ನಾಯಕ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವಭಾವಿ ಸಿದ್ಧತೆ ಮತ್ತು ಸಮಯ ನಿರ್ವಹಣೆ ಕುರಿತು ಮಾರ್ಗದರ್ಶನ ನೀಡಿದರು. ಇನ್ನೊಬ್ಬ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಉಡುಪಿಯ ಶ್ರೀ ಮಾಧ್ವ ವಾದಿರಾಜ ಇನ್ಸ್ಟಿ ಟ್ಯೂಟ್ ಆಫ್ ಟೆಕ್ನಾಲಜಿ ಆಂಡ್ ಮ್ಯಾನೇಜ್ಮೆಂಟ್ನ ಸೀನಿಯರ್ ಅಸಿಸ್ಟಂಟ್ ಪ್ರೊಫೆಸರ್ ರಾಘವೇಂದ್ರ ಹೆಗಡೆ, ಆರ್ಟಿಫಿಶಿಯಲ್ ಇಂಟಲಿಜೆನ್ಸಿ, ಮಶಿನ್ ಲರ್ನಿಂಗ್ ಮತ್ತು ಇಂಜಿನಿಯರಿಂಗ್ ನಂತರದ ಉದ್ಯೋಗಾವಕಾಶಗಳ ಕುರಿತು ಮಹತ್ವದ ಮಾರ್ಗದರ್ಶನ ನೀಡಿದರು. ಈ ಕಾರ್ಯಕ್ರಮ ನಡೆಯುವಲ್ಲಿ ಕಾರಣೀಕರ್ತರಾದ ಸವಿ ಫೌಂಡೇಶನ್ ಸದಸ್ಯರೂ, ಕುಮಟಾದ ವಿದ್ಯಾಧಿರಾಜ ಪಾಲಿಟೆಕ್ನಿಕಲ್ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಡಾ. ರತನ್ ಗಾಂವಕರ್ ಮಾತನಾಡಿ ಪರಿಶ್ರಮದಿಂದ ಜೀವನದ ಗುರಿ ಸಾಧ್ಯ ಎಂಬ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜಿನ ಅಧ್ಯಕ್ಷರಾದ ಡಾ. ಜಿ.ಜಿ.ಹಗಡೆ, ಪ್ರಾಚಾರ್ಯರಾದ ಶ್ರೀ ಡಿ.ಎನ್ ಭಟ್ಟ, ಎಲ್ಲಾ ಉಪನ್ಯಾಸಕ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.