ಯಲ್ಲಾಪುರ : ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಹಿಮ್ಮೆಟ್ಟಿಸಲು ಪರ್ಯಾಯ ನೀತಿಗಳಿಗಾಗಿ ಅಖಿಲ ಭಾರತದಾದ್ಯಂತ ಮುಷ್ಕರ ಏರ್ಪಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ 72 ಗಂಟೆಗಳ ಮಹಾಧರಣಿ ಹಮ್ಮಿಕೊಂಡಿದೆ. ಉತ್ತರಕನ್ನಡ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘಟನೆ ಸಭೆ ಸೇರಿ ಬೆಂಗಳೂರಿನಲ್ಲಿ ನಡೆಯಲಿರುವ ಮಹಾಧರಣಿಯಲ್ಲಿ ಭಾಗವಹಿಸಲು ತೀರ್ಮಾನಿಸಿದ್ದೇವೆ ಎಂದು ಕ.ಇ.ನಿ.ಕಾ ಫೆಡರೇಶನ್ ಜಿಲ್ಲಾ ಉಪಾಧ್ಯಕ್ಷ ಶಾಂತಾರಾಮ ನಾಯಕ ಹೇಳಿದರು.
ಅವರು ಪಟ್ಟಣದ ದೇವಿ ದೇವಸ್ಥಾನ ರಸ್ತೆಯಲ್ಲಿರುವ ತಮ್ಮ ಕಚೇರಿಯ ಆವಾರದಲ್ಲಿ ನ.26, 27 ಮತ್ತು 28ರಂದು ಮೂರು ದಿನಗಳ ಕಾಲ ನಡೆಯಲಿರುವ ಮಹಾಧರಣಿಯ ಭಿತ್ತಿಚಿತ್ರ ಅನಾವರಣಗೊಳಿಸಿ ಮಾತನಾಡಿದರು. ಕಾರ್ಮಿಕರ ಒಳಿತಿಗಾಗಿ ಮತ್ತು ರೈತಾಪಿ ವರ್ಗದವರ ಅಭ್ಯುದಯಕ್ಕಾಗಿ ಸರ್ಕಾರ ಅನೇಕ ಬೇಡಿಕೆಗಳನ್ನು ಈಡೇರಿಸಬೇಕಿದ್ದು 21 ಹಕ್ಕೊತ್ತಾಯಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಇದರ ಅನುಷ್ಠಾನಕ್ಕೆ ಆಗ್ರಹಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್,ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿ ಕಾರ್ಮಿಕರ ಸಂಘ ಹಾಗೂ ಉತ್ತರಕನ್ನಡ ಜಿಲ್ಲಾ ಸಮಿತಿಗಳು ಭಾಗವಹಿಸಲಿದ್ದು 50000 ಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ತಿಲಕ್ ಜೆ ಗೌಡ, ಜಿಲ್ಲಾ ಉಪಾಧ್ಯಕ್ಷರಾದ ಹನುಮಂತ ಸಿಂದಗಿ, ತಿಮ್ಮಪ್ಪ ಎಸ್ ಗೌಡ, ಜಿಲ್ಲಾ ಕಾರ್ಯದರ್ಶಿ ಕೃಷ್ಣ ಭಟ್ಟ, ಜಿಲ್ಲಾ ಪದಾಧಿಕಾರಿ ಜ್ಯೋತಿ ನಾರ್ವೇಕರ, ಶಶಿಕಲಾ , ಚಂದ್ರಕಾಂತ ಪುತ್ತು ಮರಾಠೆ ಹಾಗೂ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.