ಶಿರಸಿ: ಸಹಕಾರಿ ಸಂಘಗಳು ರೈತರಿಗೆ ಆರ್ಥಿಕ ಧೈರ್ಯ ತುಂಬುವ ಮೂಲಕ ಬಲಿಷ್ಠ ರನ್ನಾಗಿ ಮಾಡುತ್ತಿದೆ ಎಂದು ಶಿರಸಿ ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ನಗರದ ಶಿರಸಿ ತಾಲೂಕಾ ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘದಲ್ಲಿ ಶನಿವಾರ ಆಯೋಜಿಸಿದ್ದ 70ನೇ ಸಹಕಾರ ಸಪ್ತಾಹ ಅಂಗವಾಗಿ ಸಂಘದ ನಿಷ್ಠಾವಂತ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರಿ ಸಪ್ತಾಹ ಕಾರ್ಯಕ್ರಮಗಳು ಸಹಕಾರಿ ವ್ಯವಸ್ಥೆಯನ್ನು ಜನರಿಗೆ ತಿಳಿಸುತ್ತಿದೆ. ಸಹಕಾರಿ ಸಂಘಗಳಿಂದ ರೈತರಿಗೆ ಸಾಕಷ್ಟು ಅನುಕೂಲಗಳಾಗುತ್ತದೆ ಎಂದರು.
ರೈತರಿಗೆ ಆರ್ಥಿಕ ಧೈರ್ಯವನ್ನು ತುಂಬುವ ಕೆಲಸ ಸಹಕಾರಿ ಸಂಘಗಳು ಮಾಡುತ್ತಿದೆ. ಜಿಲ್ಲೆಯಲ್ಲಿ ಸಹಕಾರಿ ಸಂಘಗಳು ಬಲಿಷ್ಠವಾಗಿದೆ. ಸಹಕಾರಿ ಸಂಘಗಳು ರೈತರ ನಂಬಿಕೆ-ವಿಶ್ವಾಸಗಳನ್ನು ಮುಂದುವರೆಸಿಕೊಂಡು ಹೋಗಬೇಕು. ರೈತರು ಇಂದು ಉಸಿರಾಡುತ್ತಿದ್ದಾರೆ ಎಂದರೆ ಅದಕ್ಕೆ ಮುಖ್ಯ ಕಾರಣ ಸಹಕಾರಿ ಸಂಘಗಳು. ಸಹಕಾರಿ ಸಂಘಗಳ ಬೆಳವಣಿಗೆಗೆ ನಾವೆಲ್ಲರೂ ಸಹಕಾರ ನೀಡಬೇಕು ಎಂದು ಅವರು ಹೇಳಿದರು.
ಇತ್ತಿಚೀನ ದಿನದಲ್ಲಿ ಅಡಿಕೆ ತೋಟಗಳು ಅನೇಕ ರೋಗಗಳಿಗೆ ತುತ್ತಾಗುತ್ತಿದೆ. ರೈತರೂ ಸಹ ಜಾಗೃತರಾಗಬೇಕು. ರೈತರ ಪರವಾಗಿ ಸರ್ಕಾರದ ಮಟ್ಟದಲ್ಲಿ ಧ್ವನಿ ಎತ್ತುವ ಕೆಲಸ ಮಾಡುತ್ತೇನೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೆಕೈ ಮಾತನಾಡಿ, ಈಗೀಗ ನಮ್ಮ ಮನೆಗಳಲ್ಲಿ ಸಹಕಾರ ವ್ಯವಸ್ಥೆ ಕಡಿಮೆಯಾಗುತ್ತಿದೆ. ಮನೆಗಳಲ್ಲಿನ ಕೊಟ್ಟಿಗೆ, ಹಸು ಸಾಕುವವರ ಸಂಖ್ಯೆ ಕ್ಷೀಣಿಸುತ್ತಿದೆ. ಇದು ಎಲ್ಲ ಸಮಸ್ಯೆಗೆ ಮೂಲವಾಗಿದೆ. ಮೊದಲು ನಮ್ಮ ಮನೆಗಳ ಸಹಕಾರ ವ್ಯವಸ್ಥೆ ಸುಧಾರಿಸುವತ್ತ ಗಮನವಿಡಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಘದ ನಿಷ್ಠಾವಂತ ಸದಸ್ಯರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಟಿಎಂಎಸ್ ಸೊಸೈಟಿ ಅಧ್ಯಕ್ಷ ಜಿ ಎಂ ಹೆಗಡೆ ಹುಳಗೋಳ, ಚಲನಚಿತ್ರ ನಟ ನಿರ್ನಳ್ಳಿ ರಾಮಕೃಷ್ಣ, ಜಿ.ಟಿ ಹೆಗಡೆ ತಟ್ಟಿಸರ, ಎಸ್ ಪಿ ಶೆಟ್ಟಿ, ಟಿ.ಎಂ.ಎಸ್ ಉಪಾಧ್ಯಕ್ಷ ಎಂ.ಪಿ ಹೆಗಡೆ, ಟಿ.ಎಂ.ಎಸ್. ಮುಖ್ಯ ಕಾರ್ಯನಿರ್ವಾಹಕ ಎಂ.ಎ. ಹೆಗಡೆ ಕಾನಮುಸ್ಕಿ ಸೇರಿ ಹಲವರು ಇದ್ದರು.