ಶಿರಸಿ: ಸುದೀರ್ಘ ಕಾಲ ಸಹಕಾರಿ ಕ್ಷೇತ್ರ ದಲ್ಲಿ ಸಾಧನೆ ಮಾಡಿದ ಎನ್.ಪಿ.ಗಾಂವ್ಕರ್ ಅವರಿಗೆ ಸಹಕಾರಿ ರತ್ನ ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ. ಅವರು ಕೆಡಿಸಿಸಿ ಬ್ಯಾಂಕ್ ನಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ಬ್ಯಾಂಕ್ ನ ಅಭಿವೃದ್ಧಿಗೆ ಅವಿರತ ಶ್ರಮಿಸಿದ್ದಾರೆ ಎಂದು ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ್ ಹೇಳಿದರು.
ಶನಿವಾರ ನಗರದಲ್ಲಿರುವ ಎನ್.ಪಿ. ಗಾಂವ್ಕರ್ ಅವರ ನಿವಾಸಕ್ಕೆ ತೆರಳಿ ಅವರನ್ನು ಗೌರವಿಸಿ, ಶುಭಾಶಯ ಕೋರಿ ಮಾತನಾಡಿದ ಅವರು ಸಹಕಾರಿ ದಿಗ್ಗಜನನ್ನು ತಡವಾದಾರೂ ಸರ್ಕಾರ ಸಹಕಾರಿ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಯಾವುದೇ ಸ್ವಾರ್ಥವಿಲ್ಲದೇ ಸಹಕಾರಿ ಕ್ಷೇತ್ರದಲ್ಲಿ ಇವರು ಕೆಲಸ ಮಾಡಿದ್ದಾರೆ. ಸಹಕಾರಿ ರತ್ನದಂತಹ ಶ್ರೇಷ್ಠ ಪ್ರಶಸ್ತಿ ನಮ್ಮ ಜಿಲ್ಲೆಯ ಸಾಧಕರಿಗೆ ಸಿಕ್ಕಿರುವುದು ಸಂತಸ ತಂದಿದೆ ಎಂದರು.
ಸಹಕಾರಿರತ್ನ ಪ್ರಶಸ್ತಿ ಸ್ವೀಕರಿಸಲಿರುವ ಎನ್.ಪಿ. ಗಾಂವ್ಕರ್ ಮಾತನಾಡಿ, ಸಹಕಾರ ರತ್ನ ಪ್ರಶಸ್ತಿ ಸಿಕ್ಕಿರುವುದು ಸಂತಸ ತಂದಿದೆ. ಈ ಮೊದಲೇ ನನಗೆ ಸಹಕಾರಿ ರತ್ನ ಪ್ರಶಸ್ತಿ ಸಿಗಬೇಕಾಗಿತ್ತು. ಇದರ ಬಗ್ಗೆ ಸ್ವಲ್ಪ ಬೇಸರವಿದೆ. ಕೆಡಿಸಿಸಿ ಬ್ಯಾಂಕ್ ನಲ್ಲಿ ಅರ್ಧ ಶತಕದಷ್ಟು ವರ್ಷ ಕೆಲಸ ಮಾಡಿದ್ದೇನೆ. ಎಲ್ಲರ ಸಹಕಾರದಿಂದ ನನಗೆ ಈ ಪ್ರಶಸ್ತಿ ಬಂದಿದೆ ಎಂದರು. ಈ ವೇಳೆ ಬ್ಯಾಂಕಿನ ಎಂ.ಡಿ. ಆರ್.ಜಿ. ಭಾಗ್ವತ್, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ರಾಮಕೃಷ್ಣ ಹೆಗಡೆ ಕಡವೆ ಸೇರಿ ಹಲವರು ಇದ್ದರು.