Slide
Slide
Slide
previous arrow
next arrow

ನಿಬ್ಬೆರಗಾಗಿಸಿದ ರಾಜ್ಯಮಟ್ಟದ ಹೋರಿ ಬೆದರಿಸುವ ಹಬ್ಬ

300x250 AD

ಬನವಾಸಿ: ಜಾನಪದ ಸೊಗಡಿನ ಹಿನ್ನೆಲೆ ಹೊಂದಿರುವ ಹಾಗೂ ಮನುಷ್ಯರಿಗೆ ಪ್ರಾಣಾಪಾಯವಾಗುವ ಅರಿವಿದ್ದರೂ, ಅದನ್ನು ಲೆಕ್ಕಿಸದೇ ರೋಮಾಂಚನದೊಂದಿಗೆ ರಾಜ್ಯಮಟ್ಟದ ಹೋರಿ ಬೆದರಿಸುವ ಹಬ್ಬ ಸಮೀಪದ ಮಧುರವಳ್ಳಿ ಗ್ರಾಮದಲ್ಲಿ ಬುಧವಾರ ನಡೆಯಿತು.ಗ್ರಾಮದ ಶ್ರೀ ಮಾರಿಕಾಂಬಾ ಸೇವಾ ಸಮಿತಿ ಹಾಗೂ ಶ್ರೀ ರಾಮೇಶ್ವರ ಯುವಕ ಸಂಘದ ಆಶ್ರಯದಲ್ಲಿ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಕೊರಳಲ್ಲಿ ಮಣಗಂಟಲೆ ಕೊಬ್ಬರಿ ಮಾಲೆ ಧರಿಸಿದ ಹೋರಿಗಳು ಅಖಾಡದಲ್ಲಿ ಮಿಂಚಿಮರೆಯಾಗುತ್ತಿದ್ದ ದೃಶ್ಯ ಅಲ್ಲಿ ಸೇರಿದ್ದ ಸಾವಿರಾರು ಪ್ರೇಕ್ಷಕರ ಮನಸೂರೆಗೊಂಡವು. 200ಕ್ಕಿಂತಲು ಹೆಚ್ಚಿನ ಹೋರಿಗಳು ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ತಮ್ಮಲ್ಲಿ ಅಡಗಿದ್ದ ಸಾಹಸವನ್ನು ತೋರಿದವು.

ಬೇರೆ ಬೇರೆ ಊರುಗಳಿಂದ ರೈತರು ತಮ್ಮ ಹೋರಿಗಳೊಂದಿಗೆ ಆಗಮಿಸಿ ಹಬ್ಬಕ್ಕೆ ಮೆರಗು ತಂದರು. ರೈತರು ತಮ್ಮ ಅಚ್ಚುಮೆಚ್ಚಿನ ಹೋರಿಗಳಿಗೆ ವಿವಿಧ ಹೆಸರುಗಳಿನ್ನಿಟ್ಟಿದ್ದರು. ಅಂತಹ ಹೆಸರು ಹೊಂದಿದ ಹೋರಿಗಳು ಹಬ್ಬದಲ್ಲಿ ಭಾಗವಹಿಸಿ ನೋಡುಗರನ್ನು ಬೆರಗುಗೊಳಿಸಿದವು.

ಸ್ಪರ್ಧೆಯಲ್ಲಿ ಓಡುವ ಹೋರಿಯ ಜತೆಗೆ ಅಖಾಡ ತೋರಿಸುವ ಹೋರಿಗಳನ್ನೊಮ್ಮೆ ಪ್ರಾಯೋಗಿಕವಾಗಿ ಅಖಾಡದಲ್ಲಿ ಓಡಿಸಲಾಗುತ್ತದೆ. ನಂತರ ಹಬ್ಬಕ್ಕೆಂದೇ ಅಣಿಯಾದ ಹೋರಿಗಳನ್ನು ಅತ್ಯಂತ ವೈಭವದೊಂದಿಗೆ ಶೃಂಗರಿಸಿ ಅಖಾಡದಲ್ಲಿ ತಂದು ಓಡಿಸಿದರು. ಹೋರಿಗಳು ಪೈಲ್ವಾನರ ಕೈಗೆ ಸಿಗದೆ ಚಿರತೆ ವೇಗದಲ್ಲಿ ಓಡುತ್ತಿದ್ದವು.

ಮಾಲೀಕರು ತಮ್ಮ ಹೋರಿಗಳಿಗೆ ಒಣ ಕೊಬ್ಬರಿ ಮಾಲೆಗಳನ್ನು ಹಾಕಿ, ಏಳೆಂಟು ಜನರು ಹಗ್ಗದ ಸಹಾಯದಿಂದ ಹೋರಿ ಹಿಡಿದು ತಂದು ಅಖಾಡಕ್ಕೆ ಬಿಡುತ್ತಿದ್ದರು. ಕೊಬ್ಬರಿ ಮಾಲೆ ಹರಿಯಲು ಬರುವ ಪೈಲ್ವಾನರ ಕೈಗೆ ಸಿಗದಂತೆ ಓಡಿ ದಡ ಸೇರುತ್ತಿದ್ದವು. ಕೆಲವು ಹೋರಿಗಳು ಆವೇಶಭರಿತವಾಗಿ ಓಡಿದರೆ, ಇನ್ನು ಕೆಲವು ಹೂಂಕರಿಸುತ್ತಾ, ಮೆಲ್ಲನೆ ಹೆಜ್ಜೆ ಹಾಕುತ್ತಾ ಆನೆ ನಡಿಗೆಯಂತೆ ನಡೆದು ನೋಡುಗರ ಕಣ್ಮನ ಸೆಳೆದವು. ಹೀಗೆ ಓಡಿ ಹೋಗುವ ಹೋರಿಗಳನ್ನು ತಡೆದು ಕೊಬ್ಬರಿ ಸರವನ್ನು ತೆಗೆಯಲು ಪೈಲ್ವಾನರು ಪ್ರಾಣದ ಹಂಗು ತೊರೆದು ಶ್ರಮಿಸಿದರು.

300x250 AD

ನೆರೆದ ಪ್ರೇಕ್ಷಕರು ಓಡಿ ಹೋಗುವ ಹೋರಿಗಳ ದೃಶ್ಯಗಳನ್ನು ಕಂಡು ಕೇಕೆ, ಚಪ್ಪಾಳೆ, ಶಿಳ್ಳೆ ಹೊಡೆದು ಹಬ್ಬಕ್ಕೆ ಮೆರಗು ತಂದರು. ಸಾವಿರಾರು ಅಭಿಮಾನಿಗಳು, ರೈತರು ಹೋರಿಗಳು ಓಡುವ ಓಟದ ದೃಶ್ಯಗಳನ್ನು ಕಣ್ತುಂಬಿಕೊಂಡರು.

ಹೋರಿ ಹಿಡಿಯುವಾಗ ಕೆಲವು ಪೈಲ್ವಾನರಿಗೆ ಸಣ್ಣ ಪುಟ್ಟ ಗಾಯಗಳಾದವು. ಇದನ್ನು ಬಿಟ್ಟರೆ ಹೋರಿ ಬೆದರಿಸುವ ಹಬ್ಬ ಬಹುತೇಕವಾಗಿ ಶಾಂತಿಯುತವಾಗಿ ನಡೆಯಿತು. ಸಂಜೆ ಹೋರಿಗಳಿಗೆ ಬಹುಮಾನ ವಿತರಿಸಲಾಯಿತು.

Share This
300x250 AD
300x250 AD
300x250 AD
Back to top