ಕುಮಟಾ: ದೀಪಗಳ ಹಬ್ಬ ದೀಪಾವಳಿ. ದೀಪಾವಳಿ ಸಂಭ್ರಮದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಗೋ ಪೂಜೆ ಕೂಡ ಪ್ರಮುಖ ಸ್ಥಾನವನ್ನು ಪಡೆದಿದೆ. ಮನೆಯಲ್ಲಿರುವ ದನ-ಕರುಗಳಿಗೆ ಅಲಂಕರಿಸಿ, ಅವುಗಳಿಗೆ ಪೂಜೆ ಮಾಡಿ ತಿಂಡಿ-ತಿನಿಸುಗಳನ್ನು ನೀಡುವ ಸಂಪ್ರದಾಯವು ಹಿಂದಿನಿಂದಲೂ ನಡೆದು ಬಂದಿದೆ.
ನಾವು ಆಚರಿಸುವ ಪ್ರತಿಯೊಂದು ಸಂಪ್ರದಾಯಕ್ಕೂ ಒಂದೊಂದು ಹಿನ್ನೆಲೆ ಇರುವಂತೆ ದೀಪಾವಳಿಯ ಸಮಯದಲ್ಲಿನ ಗೋ ಆರಾಧನೆಗೂ ಒಂದು ಪೌರಾಣಿಕ ಹಿನ್ನೆಲೆ ಇದೆ ಎನ್ನಲಾಗುತ್ತದೆ. ಈ ಹಿನ್ನೆಲೆಯ ಪ್ರಕಾರ ಹಿಂದೆ ಬಲಿಚಕ್ರವರ್ತಿಯು ವಾಮನರೂಪಿ ವಿಷ್ಣುವಿಗೆ ದಾನ ನೀಡುವಾಗ ವಾಮನನು ತನ್ನ ಮೂರನೆಯ ಹೆಜ್ಜೆಯನ್ನು ಬಲಿ ಚಕ್ರವರ್ತಿಯ ತಲೆ ಮೇಲೆ ಇಟ್ಟನು. ಆ ಸಮಯದಲ್ಲಿ ಬಲಿ ಚಕ್ರವರ್ತಿಯಲ್ಲಿ ವಾಮನನು ಯಾವುದಾದರೊಂದು ವರವನ್ನು ಕೇಳಿದಾಗ ಬಲಿಚಕ್ರವರ್ತಿಯು ಪ್ರತಿವರ್ಷವು ಒಂದು ದಿನ ತಾನು ಭೂಮಿಗೆ ಆಗಮಿಸಿಬೇಕೆಂದು, ಭೂಮಿಯಲ್ಲಿ ತನ್ನ ನೆನಪಿಗಾಗಿ ಆ ದಿನವನ್ನು ಆಚರಿಸಬೇಕು ಎಂಬುದಾಗಿ ಕೇಳಿದನು. ಅಲ್ಲದೆ, ಆ ದಿನವು ತನ್ನ ಸಾಮ್ರಾಜ್ಯದಲ್ಲಿರುವಂತೆಯೇ , ಸರ್ವ ಸಮೃದ್ಧಿ ಪರಿಪಾಲನೆಯಿಂದ ಕೂಡಿರಬೇಕೆಂದು ಆಶಿಸಿದನು.
ಹೀಗೆ ವಾಮನರೂಪಿ ವಿಷ್ಣು ಬಲಿಚಕ್ರವರ್ತಿಗೆ ವರವನ್ನು ನೀಡಿ ಪಾತಾಳರಾಜ್ಯದಲ್ಲಿ ಇಂದ್ರಪ್ರಸ್ಥಕ್ಕಿಂತಲೂ ಸಾವಿರ ಪಟ್ಟು ಮಿಗಿಲಾದ ಅರಮನೆಯಲ್ಲಿ ಮಹಾಬಲಿಯನ್ನು ಪಟ್ಟಾಭಿಷೇಕ ಮಾಡುತ್ತಾನೆ. ಮಾತ್ರವಲ್ಲ ದೇವತೆಗಳ ಮಾತು ಕೇಳಿ ಪ್ರಜಾವತ್ಸಲನಾದ ಮಹಾಬಲಿಯನ್ನು ಅವನ ನಾಡಿನಿಂದ ಗಡಿಪಾರು ಮಾಡಿದ್ದಕ್ಕೆ ಪ್ರಾಯಶ್ಚಿತ್ತವಾಗಿ ಸ್ವತಃ ಮಹಾವಿಷ್ಣುವೇ ಮಹಾಬಲಿಯ ಅರಮನೆಯ ದ್ವಾರಪಾಲಕನಾಗಿ ಸೇವೆ ಮಾಡುತ್ತಾನೆ. ಅದರಂತೆಯೇ, ದೀಪಾವಳಿಯ ವೇಳೆ ಒಂದು ದಿನವನ್ನು ಬಲಿಪಾಡ್ಯಮಿ ಎಂದು ಬಲಿ ಚಕ್ರವರ್ತಿಯ ನೆನಪಿಗಾಗಿ ಆಚರಿಸಲಾಗುತ್ತದೆ. ಈ ದಿನ ಲಕ್ಷ್ಮೀ ಪೂಜೆ, ಗೋ ಪೂಜೆ ಇವುಗಳನ್ನು ಮಾಡಲಾಗುವುದು. ಯಾಕೆಂದರೆ, ಬಲಿಚಕ್ರವರ್ತಿಯ ಸಾಮ್ರಾಜ್ಯದಲ್ಲಿ ಗೋವುಗಳಿಗೆ ಅತಿಯಾದ ಮಹತ್ವ ನೀಡಲಾಗುತ್ತಿತ್ತು. ಗೋವಿಗೆ ಪೂಜೆಗಳನ್ನು ಆರಾಧನೆಯನ್ನು ಮಾಡಲಾಗುತ್ತಿತ್ತು. ಅದರ ಸವಿನೆನಪಿಗಾಗಿ ಬಲಿಪಾಡ್ಯಮಿ ದಿವಸ ಗೋವುಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಇನ್ನು ಹೆಚ್ಚಿನ ಕಡೆಗಳಲ್ಲಿ ಆ ದಿನದಂದು ಹಸುವಿನ ಹಾಲನ್ನೂ ಕರೆಯಬಾರದೆಂಬ ಪ್ರತೀತಿ ಇದೆ. ಕರುಗಳು ಬೇಕಾದಷ್ಟು ಹಾಲು ಕುಡಿದು ಸಂತೋಷವಾಗಿರಬೇಕೆಂಬುದು ಇದರ ಉದ್ದೇಶವಾಗಿದೆ.– ನಟರಾಜ್ ಗದ್ದೆಮನೆ