ಅಂಕೋಲಾ: ಸಮಾಜದಲ್ಲಿ ಸಭ್ಯ ನಾಗರಿಕರು ಕಣ್ಣೆದುರಿಗೆ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ಜಾಣ ಕುರುಡುತನ ಪ್ರದರ್ಶಿಸುವುದರಿಂದ ಅಪರಾಧಿಗಳು ವಿಜೃಂಭಿಸುತ್ತಾರೆ ಎಂದು ಜೆಎಂಎಫ್ಸಿ ನ್ಯಾಯಾಧೀಶ ಮನೋಹರ ಎಂ. ಅಭಿಪ್ರಾಯಪಟ್ಟರು.
ಗುರುವಾರ ಪಟ್ಟಣದ ಗೋಖಲೆ ಸೆಂಟಿನರಿ ಕಾಲೇಜಿನಲ್ಲಿ ರಾಷ್ಟ್ರೀಯ ಕಾನೂನು ಸೇವಾ ದಿನಾಚರಣೆ ನಿಮಿತ್ತ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಏರ್ಪಡಿಸಲಾಗಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ವಕೀಲರ ಸಂಘದ ಅಧ್ಯಕ್ಷ ವಿನೋದ ವಿ.ಶಾನಭಾಗ ಅವರು ಕಾನೂನಿನ ಅರಿವು ಇಲ್ಲದಿರುವುದಕ್ಕೆ ಕ್ಷಮೆ ಇರುವುದಿಲ್ಲ. ಹಲವಾರು ಉಚಿತ ಕಾನೂನು ನೆರವಿನ ಯೋಜನೆಗಳ ಪರಿಚಯ ಇಲ್ಲದಿರುವುದರಿಂದ ಅವುಗಳ ಪ್ರಯೋಜನ ಅಗತ್ಯವಿರುವ ಜನರಿಗೆ ದೊರೆಯದಂತಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎಸ್.ವಿ.ವಸ್ತ್ರದ ಜನರು ಶೀಲ ಸದ್ಗುಣಿಗಳಾದರೆ ಕಾನೂನುಗಳು ಅಗತ್ಯವಿರುವುದಿಲ್ಲ. ನಾಗರಿಕ ಸಮಾಜದ ನಿರ್ವಹಣೆಯಲ್ಲಿ, ಸಾಮಾಜಿಕ ಬದಲಾವಣೆಯನ್ನು ಸಾಕಾರಗೊಳಿಸಲು ಕಾನೂನುಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ಹಿರಿಯ ವಕೀಲರಾದ ವಿ.ಎಸ್.ನಾಯಕ, ಉಮೇಶ ನಾಯ್ಕ, ನಾಗಾನಂದ ಬಂಟ, ಬಿ.ಡಿ. ನಾಯ್ಕ, ನಿತ್ಯಾನಂದ ಕವರಿ ಹಾಗೂ ಸಹಾಯಕ ಸರಕಾರಿ ಅಭಿಯೋಜಕ ಗಿರೀಶ ಪಟಗಾರ ಹಾಗೂ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ರಕ್ಷಿತಾ ನಾಯ್ಕ ಸ್ವಾಗತಿಸಿದರು, ಸಂಜನಾ ಭರತ ನಾಯ್ಕ ನಿರೂಪಿಸಿ ವಂದಿಸಿದರು.